ಕಳೆದ 15 ವರ್ಷಗಳಿಂದ ತಾಯಿಯಿಂದ ದೂರವಾಗಿದ್ದ ವಿಶಾಖಪಟ್ಟಣಂನ 22 ವರ್ಷದ ಯುವಕನೊಬ್ಬ ತಮ್ಮ ತಾಯಿಯನ್ನು ಕೂಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ನೆರವಿನಿಂದ ದೆಹಲಿಯ ಮಹಿಳೆಯರ ಪುನಶ್ಚೇತನ ಕೇಂದ್ರವೊಂದರಲ್ಲಿ ಇದ್ದ ತಮ್ಮ ತಾಯಿಯನ್ನು ಕಂಡುಕೊಂಡಿದ್ದಾರೆ ಮಿತ್ರಜಿತ್ ಚೌಧರಿ.
ತನ್ನ ತಾಯಿ ರಮಾದೇವಿಯಿಂದ ದೂರವಾದಾಗ ಚೌಧರಿಗೆ ಕೇವಲ 7 ವರ್ಷ ವಯಸ್ಸಾಗಿತ್ತು. ಮಗನನ್ನು ಕಳೆದುಕೊಂಡ ಆಘಾತದಲ್ಲಿ ನೆನಪಿನ ಶಕ್ತಿ ಕಳೆದುಕೊಂಡಿದ್ದ ರಮಾದೇವಿ ತಮ್ಮ ಮಗನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರು.
2005ರಲ್ಲಿ ತನ್ನ ಪತಿಯೊಂದಿಗೆ ಜಗಳವಾಡಿಕೊಂಡಿದ್ದ ರಮಾದೇವಿ, ಅಲ್ಲಿಂದ ದೂರವಾದಾಗ ಮಿತ್ರಜಿತ್ಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು. ದೆಹಲಿಗೆ ಶಿಫ್ಟ್ ಆಗಿದ್ದ ರಮಾದೇವಿ ವಕೀಲೆಯಾಗಿ ಕೆಲಸ ಆರಂಭಿಸಿದ್ದರು. ಆದರೆ ಅವರಿಗೆ ಮಾನಸಿಕ ಸಮಸ್ಯೆಯೊಂದು ಕಾಣಿಸಿಕೊಂಡು ನೆನಪಿನ ಶಕ್ತಿ ಕ್ಷೀಣಿಸಲು ಆರಂಭಿಸಿತ್ತು.
ಬಳಿಕ ರಮಾದೇವಿ ಅವರನ್ನು ದೆಹಲಿಯ ಹೋಪ್ ಪುನಃಶ್ಚೇತನ ಕೇಂದ್ರಕ್ಕೆ ದಾಖಲಿಸಲಾಗಿತ್ತು. ರಮಾ ದೇವಿರನ್ನು ಅವರ ಮಗನೊಂದಿಗೆ ಸೇರಿಸುವ ಯತ್ನಕ್ಕೆ ಮುಂದಾದ ಈ ಪುನಃಶ್ಚೇತನ ಕೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮಿತ್ರಜೀತ್ ಹುಡುಕಾಟಕ್ಕೆ ಇಳಿದಿತ್ತು. ಕೊನೆಗೂ ಮಗ ಸಿಕ್ಕ ಖುಷಿಯಲ್ಲಿ ಆನಂದ ಭಾಷ್ಪ ಹರಿಸಿದ ರಮಾದೇವಿರನ್ನು ಅವರ ಮಗನೊಂದಿಗೆ ಪುನಃಶ್ಚೇತನ ಕೇಂದ್ರದಿಂದ ಕಳುಹಿಸಿಕೊಡಲಾಗಿದೆ.