ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಸ್ವಲ್ಪ ಶಾಂತವಾಗಿದೆ. ದೆಹಲಿಯಲ್ಲಿ ಕೋವಿಡ್ – 19 ವೈರಸ್ ಈಗ ದುರ್ಬಲಗೊಳ್ಳುತ್ತಿದೆ. ಇಲ್ಲಿ ಕೋವಿಡ್ – 19 ರ ಸಕ್ರಿಯ ರೋಗಿಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಈ ವೈರಸ್ ಪೀಡಿತ ರಾಜ್ಯಗಳಲ್ಲಿ ಇದು ಅತ್ಯಂತ ಕಡಿಮೆ.
ಸಕ್ರಿಯ ರೋಗಿಗಳ ವಿಷಯದಲ್ಲಿ ದೆಹಲಿ ಈಗ 14 ನೇ ಸ್ಥಾನಕ್ಕೆ ಬಂದಿದೆ. ಸುಧಾರಿಸುತ್ತಿರುವ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕೊರೊನಾಗೆ ಬಲಿಯಾದವರ ಸಂಖ್ಯೆಯೂ ಕಡಿಮೆಯಾಗಿದೆ. ದೆಹಲಿ ಮಾದರಿ ಬಗ್ಗೆ ಚರ್ಚೆಯಾಗ್ತಿದೆ. ಜನರು ಸಹಕರಿಸುತ್ತಿದ್ದು, ಇದು ಖುಷಿ ನೀಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಆರೋಗ್ಯ ಸಚಿವಾಲಯದ ಪ್ರಕಾರ, ಒಟ್ಟು ಸೋಂಕಿತರ ಸಂಖ್ಯೆ 1,39,156 ಕ್ಕೆ ತಲುಪಿದೆ. ಈ ಪೈಕಿ 1,25,226 ಜನರು ಗುಣಮುಖರಾಗಿದ್ದಾರೆ. ಅಂದರೆ, ಸಕ್ರಿಯ ರೋಗಿಗಳ ಸಂಖ್ಯೆ 9897ಕ್ಕೆ ತಲುಪಿದೆ. ಇದು ಒಟ್ಟು ಸೋಂಕಿತರ ಶೇಕಡಾ 7.1 ರಷ್ಟಿದೆ. ಜುಲೈ 3 ರ ಹೊತ್ತಿಗೆ ಈ ರೋಗಿಗಳ ಸಂಖ್ಯೆ 26,148 ಇತ್ತು. ಇದರ ಪ್ರಕಾರ ಸಕ್ರಿಯ ರೋಗಿಗಳು ಒಂದು ತಿಂಗಳಲ್ಲಿ ಶೇಕಡಾ 62 ರಷ್ಟು ಕಡಿಮೆಯಾಗಿದ್ದಾರೆ. ಮುಂದಿನ ಎರಡು ಮೂರು ತಿಂಗಳಲ್ಲಿ ಈ ರೋಗಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.