ಕೊರೊನಾ ತಡೆಗಾಗಿ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರಕ್ಕೆ ಈ ಆಪ್ ಬಗ್ಗೆ ಮಾಹಿತಿ ಗೊತ್ತಿಲ್ಲದ ಕಾರಣ ಕೇಂದ್ರ ಮಾಹಿತಿ ಆಯೋಗ ನೋಟಿಸ್ ನೀಡಿದೆ.
ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಿತ್ತು. ಈ ಅಪ್ಲಿಕೇಶನ್ನ ಸಹಾಯದಿಂದ ಸೋಂಕಿತರನ್ನ ಪತ್ತೆ ಹಚ್ಚೋದು ಸುಲಭ ಅಂತಾ ಕೋಟ್ಯಾಂತರ ಜನರು ಈ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಿದ್ದರು. ಆದರೆ ಇದೀಗ ಈ ಅಪ್ಲಿಕೇಶನ್ ಅಭಿವೃದ್ಧಿ ಮಾಡಿದ್ದರ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ತಡಬಡಾಯಿಸುತ್ತಿದೆ.
ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲ ಆಪ್ಗಳನ್ನು ಅಭಿವೃದ್ಧಿ ಮಾಡುತ್ತೆ. ಹೀಗಾಗಿ ಆರೋಗ್ಯ ಸೇತು ಆಪ್ ಕೂಡ ಎನ್ಐಸಿ ನಿರ್ಮಿತ ಅಂತಾನೇ ಭಾವಿಸಲಾಗಿತ್ತು. ಆದರೆ ಎನ್ಐಸಿ ಈ ಅಪ್ಲಿಕೇಶನ್ ಯಾರು ಅಭಿವೃದ್ಧಿ ಮಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲ ಅಂತಾ ಹೇಳಿದೆ.
ಆರೋಗ್ಯ ಸೇತು ಆಪ್ ಬಗ್ಗೆ ಮಾಹಿತಿ ಅಸ್ಪಷ್ಟವಾಗಿದೆ ಅಂತಾ ಆರ್ಟಿಐ ಕಾರ್ಯಕರ್ತ ಸೌರವ್ ದಾಸ್ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿಗೆ ಹಾರಿಕೆ ಉತ್ತರ ನೀಡಿದ್ದ ಎನ್ಐಸಿ ಆಪ್ಗೆ ಸಂಬಂಧಿಸಿದ ಮಾಹಿತಿ ನಮ್ಮ ಬಳಿ ಇಲ್ಲ. ಇದು ಇ ಆಡಳಿತ ವಿಭಾಗಕ್ಕೆ ಸೇರಿದ್ದು ಅಂತಾ ಹೇಳೋ ಮೂಲಕ ಪರಿಸ್ಥಿತಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ.
ಇದೀಗ ಕೇಂದ್ರ ಇಲಾಖೆಯ ಈ ಹಾರಿಕೆ ಉತ್ತರ ಕೇಳಿದ ಆಯೋಗ ಎನ್ಐಸಿ ಹಾಗೂ ಇ ಆಡಳಿತ ವಿಭಾಗಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ನ.24ರಂದು ಇಲಾಖೆ ಎದುರು ಹಾಜರಾಗುವಂತೆ ಸೂಚನೆ ನೀಡಿದೆ.