ಆಸ್ಟ್ರೇಲಿಯಾದಲ್ಲಿ 7 ತಿಂಗಳು ಕೋಮಾದಲ್ಲಿದ್ದ 21 ವರ್ಷದ ವ್ಯಕ್ತಿಗೆ ಕೊನೆಗೂ ಎಚ್ಚರ ಬಂದಿದೆ. ಆದ್ರೆ ಎಚ್ಚರ ಬರ್ತಿದ್ದಂತೆ ವ್ಯಕ್ತಿ ಪೊಲೀಸ್ ಅತಿಥಿಯಾಗಿದ್ದಾನೆ. ವ್ಯಕ್ತಿ ವಿರುದ್ಧ ಪ್ರೇಯಸಿ ಹತ್ಯೆ ಆರೋಪವಿದೆ. ದಕ್ಷಿಣ ಸಿಡ್ನಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿರುವ ವ್ಯಕ್ತಿ ಕಳೆದ ಜೂನ್ ತಿಂಗಳಿನಲ್ಲಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದ. ತಲೆಗೆ ಗಂಭೀರ ಗಾಯವಾಗಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ 7 ತಿಂಗಳಿಂದ ವ್ಯಕ್ತಿ ಕೋಮಾದಲ್ಲಿದ್ದ. ಆತನಿಗೆ ಚಿಕಿತ್ಸೆ ನಡೆಯುತ್ತಿತ್ತು. ಆತ ಅಪಾರ್ಟ್ಮೆಂಟ್ ನಿಂದ ಕೆಳಗೆ ಬಿದ್ದ ಮರು ದಿನ ಪೊಲೀಸರು ಆತನ ಮನೆಗೆ ಹೋಗಿದ್ದರು. ಅಲ್ಲಿ 19 ವರ್ಷದ ಮಹಿಳೆ ಮೃತದೇಹ ಸಿಕ್ಕಿತ್ತು. ಆತ ಪ್ರೇಯಸಿಯನ್ನು ಹೊಡೆದು ಹತ್ಯೆ ಮಾಡಿದ್ದ. ನಂತ್ರ ಆತ ಆತ್ಮಹತ್ಯೆಗೆ ಯತ್ನಿಸಿದ್ನಾ ಅಥವಾ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದನ ಎಂಬುದು ಇನ್ನೂ ಗೊತ್ತಾಗಿಲ್ಲ.
ಆತ ಮತ್ತು ಮೃತ ಮಹಿಳೆ ಚೀನಾ ಮೂಲದವರು. ಕಳೆದ ಎರಡು ವರ್ಷಗಳಿಂದ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಸ್ಟುಡೆಂಟ್ ವೀಸಾ ತೆಗೆದುಕೊಂಡು ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಕೊರೊನಾ ಕಾರಣದಿಂದಾಗಿ ಯುವತಿ ಮೃತ ದೇಹವನ್ನು ಕುಟುಂಬಸ್ಥರು ನೋಡಲು ಸಾಧ್ಯವಾಗಿರಲಿಲ್ಲ. ಆರೋಪಿ ಕೋಮಾದಿಂದ ಹೊರ ಬಂದಿದ್ದು, ಇನ್ಮುಂದೆ ಸತ್ಯ ಗೊತ್ತಾಗಬೇಕಿದೆ.