ಅರವತ್ತೆಂಟು ವರ್ಷದ ಅಸ್ವಾರಿ ಕುಲಕರ್ಣಿ ಅವರಿಗೆ ಬದುಕಿನ ಅತ್ಯಂತ ಸುಮಧುರ ಸಂಜೆಗಳು ಮತ್ತೆ ಸಿಗುತ್ತಿವೆ. ತಮ್ಮ ಹೊಸ ಬಾಳ ಸಂಗಾತಿ ಅನಿಲ್ ಯಾರ್ಡಿ ಅವರೊಂದಿಗೆ ಅವರು ಗ್ರೀನ್ ಟಿ ಕುಡಿಯುತ್ತಾ, ನೈಟ್ ಔಟ್, ಸಿನೆಮಾ ಹೀಗೆ….. ಯೌವ್ವನದ ಕಾಲದಲ್ಲಿ ಕಾಣುವ ಸಂತಸವನ್ನು, ಉತ್ಸಾಹವನ್ನು ಮತ್ತೆ ಪಡೆದಿದ್ದಾರೆ.
ಅವರು ಡಿವೋರ್ಸ್ ನಂತರ ಒಬ್ಬಂಟಿಯಾಗಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹಲವು ವರ್ಷಗಳೇ ಕಳೆದಿದ್ದವು. ಆದರೆ, ಇತ್ತೀಚೆಗೆ ಏಕಾಂಗಿತನ ಕಾಡತೊಡಗಿತ್ತು. ಬದುಕಿನಲ್ಲಿ ಭದ್ರತೆಗಾಗಿ, ತಮ್ಮ ಮನಸಿನ ತುಮುಲ ಹಂಚಿಕೊಳ್ಳಲು ಇನ್ನೊಬ್ಬ ಸಂಗಾತಿ ಬೇಕು ಎನಿಸತೊಡಗಿತ್ತು. ಆಗ ಅವರಿಗೆ ಸಿಕ್ಕಿದ್ದು, ಹೆಪಿ ಸೀನಿಯರ್ ಡೇಟಿಂಗ್ ಏಜೆನ್ಸಿ. ಬದುಕಿನ ಮುಸ್ಸಂಜೆಯಲ್ಲಿ ಒಬ್ಬಂಟಿಯಾಗಿರುವ ಹಲವರಿಗೆ ಈ ಏಜೆನ್ಸಿ ಸಹಕಾರಿಯಾಗುತ್ತಿದೆ.
ಮಹಿಳೆ ಮತ್ತು ಪುರುಷ ಇಲ್ಲಿ 5 ಸಾವಿರ ರೂಪಾಯಿ ಕೊಟ್ಟು ಸೇರಿಕೊಳ್ಳಬಹುದು. ತಮ್ಮ ಬಾಳ ಸಂಗಾತಿಯನ್ನು ಆಯ್ದುಕೊಳ್ಳಬಹುದು. ಹೌದು, 2011 ರ ಜನಗಣತಿಯ ಪ್ರಕಾರ ದೇಶದಲ್ಲಿ 15 ಲಕ್ಷಕ್ಕೂ ಅಧಿಕ ಹಿರಿಯರು ಏಕಾಂಗಿಯಾಗಿದ್ದಾರೆ. ಅವರಲ್ಲಿ 9 ಲಕ್ಷಕ್ಕೂ ಅಧಿಕ ಜನ ಮಹಿಳೆಯರಿದ್ದಾರೆ.
2012 ರಲ್ಲಿ ನಿವೃತ್ತ ಪ್ರಕಾಶಕ ಮಾಧವ ದಾಮ್ಲೆ ಎನ್ನುವವರು ಮಹಾರಾಷ್ಟ್ರದ ಪುಣೆಯಲ್ಲಿ ಈ ಸಂಬಂಧ ಒಂದು ಅಧ್ಯಯನ ನಡೆಸಿದರು. ಏಕಾಂಗಿಯಾಗಿದ್ದ ಶೇ. 70 ರಷ್ಟು ಹಿರಿಯ ನಾಗರಿಕರು ತಮಗೆ ಇಳಿ ಸಂಜೆಯಲ್ಲಿ ಸಂಗಾತಿಯ ಅವಶ್ಯಕತೆ ಕಾಣುತ್ತಿದೆ ಎಂದು ಹೇಳಿಕೊಂಡಿದ್ದರು. ಇದರಿಂದ ದಾಮ್ಲೆ ಅವರು ಈ ಏಜೆನ್ಸಿ ಪ್ರಾರಂಭಿಸಿದ್ದಾರೆ.
2015 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಲೀವ್ ಇನ್ ರಿಲೇಶನ್ ಅನ್ನು ಮಾನ್ಯ ಮಾಡಿದೆ. ಆದರೂ ಭಾರತದಂಥ ಸಾಮಾಜಿಕ ವ್ಯವಸ್ಥೆ ಇರುವ ದೇಶದಲ್ಲಿ ಲೀವ್ ಇನ್ ರಿಲೇಶನ್ ಇನ್ನೂ ಜನರ ಒಪ್ಪಿತವಲ್ಲ. ಇನ್ನು ಹಿರಿಯರು ಲೀವ್ ಇನ್ ರಿಲೇಶನ್ ನಲ್ಲಿ ಇರುತ್ತಾರೆ ಎಂದರೆ ಮಕ್ಕಳು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದ ಹಿರಿಯ ಜೀವಗಳಿಗೆ ನೆಮ್ಮದಿಯ ಬದುಕು ನೀಡುವುದು ಕಷ್ಟವಾಗುತ್ತಿದೆ. ಇನ್ನು ಈ ವ್ಯವಸ್ಥೆಗೆ ಮಹಿಳೆಯರನ್ನು ಕರೆತರುವುದು ಕಷ್ಟದ ಕೆಲಸವಾಗಿದೆ. “ದೇಶಾದ್ಯಂತ 12 ಸಾವಿರ ಪುರುಷರ ಹೆಸರು ನಮ್ಮ ಬಳಿ ಇದೆ. ಆದರೆ, 1 ಸಾವಿರ ಮಹಿಳೆಯರ ಹೆಸರೂ ಇಲ್ಲ” ಎನ್ನುತ್ತಾರೆ ದಾಮ್ಲೆ.