ಕೊರೋನಾ ಲಾಕ್ ಡೌನ್ ಸಮಯದಲ್ಲಿ ಬಹುತೇಕ ಭಾಗದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಬಾಡಿಗೆಗಾಗಿ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ತಮಿಳುನಾಡು ಮೂಲದ ಈ ದಂಪತಿಗಳು ನಡೆದುಕೊಂಡಿದ್ದಾರೆ.
ಹೌದು, ತಮಿಳುನಾಡಿನ ಪಾಟುಕೊಟ್ಟೈನಲ್ಲಿರುವ 91 ವರ್ಷದ ವೈದ್ಯರೊಬ್ಬರು, ತಾವು ಬಾಡಿಗೆಗೆ ನೀಡಿರುವ ಅಂಗಡಿ ಮಾಲೀಕರಿಂದ ಮೂರು ತಿಂಗಳ ಬಾಡಿಗೆ ಪಡೆಯದೇ ಮಾನವೀಯತೆ ಮೆರೆದಿದ್ದಾರೆ.
91 ವರ್ಷದ ರತಿನಮ್ ಎನ್ನುವ ವೈದ್ಯ ನಗರದಲ್ಲಿ ಕೆಲ ಮಳಿಗೆಗಳನ್ನು ಬಾಡಿಗೆ ನೀಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರ ಇಲ್ಲದಿರುವ ಕಾರಣ ಒಂದು ತಿಂಗಳ ಬಾಡಿಗೆ ನೀಡಲು ಸಾಧ್ಯವಿಲ್ಲವೆಂದು ಅಂಗಡಿಯವರು ಕೇಳಿಕೊಂಡಾಗ, ಈ ದಂಪತಿ ಮೂರು ತಿಂಗಳು ನಿಮಗೆ ವ್ಯಾಪಾರ ಇರಲಿಲ್ಲ. ಆದ್ದರಿಂದ ಮೂರು ತಿಂಗಳು ಬಾಡಿಗೆ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಪ್ರತಿತಿಂಗಳು 1.40 ಲಕ್ಷ ಬಾಡಿಗೆ ಬರುತ್ತಿತ್ತು. ಇದೀಗ ಮೂರು ತಿಂಗಳು ಬೇಡ ಎಂದಿರುವುದರಿಂದ ಸುಮಾರು 4ಲಕ್ಷಕ್ಕೂ ಹೆಚ್ಚು ನಷ್ಟ ಈ ದಂಪತಿಗೆ ಆಗಿದೆ.
ಪಾಟುಕೊಟ್ಟೈನಲ್ಲಿಯೇ ವೈದ್ಯಕೀಯ ವೃತ್ತಿ ಮಾಡುತ್ತಿರುವ ಇವರು, ಪ್ರತಿಯೊಬ್ಬರಿಂದ ಕೇವಲ 10 ರೂ. ಹಣವನ್ನು ರೋಗಿಗಳ ಬಳಿ ಪಡೆಯುತ್ತಾರಂತೆ. ಈ ಬಗ್ಗೆ ಮಾತನಾಡಿರುವ ಅವರು, ನಮ್ಮ ಕುಟುಂಬದಲ್ಲಿ ಮಗ – ಸೊಸೆ ಇಬ್ಬರು ದುಡಿಯುತ್ತಾರೆ. ನಾವೆಲ್ಲರೂ ಒಟ್ಟಿಗೆ ಇರುವುದರಿಂದ ಹಣಕ್ಕೆ ಸಮಸ್ಯೆಯಾಗುವುದಿಲ್ಲ. ಆದರೆ ವ್ಯಾಪಾರಸ್ಥರ ಸ್ಥಿತಿ ಆಗಲ್ಲ. ಆದ್ದರಿಂದ ಬಾಡಿಗೆ ಮನ್ನಾ ಮಾಡಿದೆ ಎಂದಿದ್ದಾರೆ.