ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಕೇಸ್ಗಳು ವರದಿಯಾಗುತ್ತಿದೆ. ವೈದ್ಯರು ಕೊರೊನಾ ವೈರಸ್ ವಿರುದ್ಧ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೆಲ ಮಹತ್ವದ ಸಲಹೆಗಳನ್ನ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಸರಿ ಸುಮಾರು 3,49,691 ಮಂದಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,69,60,172 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ . ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ, ಮೆದಾಂತಾ ಚೇರ್ಮನ್ ಡಾ. ನರೇಶ್ ಟ್ರೆಹಾನ್, ಏಮ್ಸ್ ಪ್ರಾಧ್ಯಾಪಕ ನವೀತ್ ವಿಗ್ ಹಾಗೂ ಡೈರೆಕ್ಟರ್ ಜನರಲ್ ಹೆಲ್ತ್ ಸರ್ವೀಸ್ ಡಾ. ಸುನಿಲ್ ಕುಮಾರ್ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವಿಚಾರವಾಗಿ ಮಾತನಾಡಿ ಜನರು ಕೈಗೊಳ್ಳಬೇಕಾದ ಮುಖ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.
ಸಾಮಾನ್ಯವಾಗಿ ಅನೇಕರಿಗೆ ಕೊರೊನಾ ಸೌಮ್ಯ ಲಕ್ಷಣಗಳೇ ಕಾಣಿಸಿಕೊಳ್ಳುತ್ತೆ. ಗಂಭೀರ ಲಕ್ಷಣಗಳನ್ನ ಹೊಂದಿರುವ 10 ರಿಂದ 15 ಪ್ರತಿಶತ ಮಂದಿ ಮಾತ್ರ ರೆಮಿಡಿಸಿವರ್, ಪ್ಲಾಸ್ಮಾ ಥೆರಪಿ ಹಾಗೂ ಕೃತಕ ಆಮ್ಲಜನಕ ವ್ಯವಸ್ಥೆಯ ಅವಶ್ಯಕತೆ ಹೊಂದಿರ್ತಾರೆ ಎಂದು ಗುಲೇರಿಯಾ ಹೇಳಿದ್ರು.
ರೆಮಿಡಿಸಿವರ್ ಯಾವುದೇ ಮ್ಯಾಜಿಕ್ ಮಾಡೋದಿಲ್ಲ. ಯಾರು ಗಂಭೀರ ಲಕ್ಷಣಗಳನ್ನ ಹೊಂದಿರುತ್ತಾರೋ ಯಾರ ದೇಹದಲ್ಲಿ ಆಮ್ಲಜನಕ ಪ್ರಮಾಣ 93ಕ್ಕಿಂತ ಕಡಿಮೆ ಇರುತ್ತದೆಯೋ ಅವರಿಗೆ ಮಾತ್ರ ಈ ಚುಚ್ಚುಮದ್ದನ್ನ ನೀಡಲಾಗುತ್ತದೆ.
ಇನ್ನು ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡೋದಾದ್ರೆ ಜನರಲ್ಲಿ ಕೊರೊನಾ ಬಗ್ಗೆ ಚಿಂತೆ ಶುರುವಾಗಿದೆ. ಹೀಗಾಗಿ ಕೊರೊನಾ ಶುರುವಾಗುತ್ತಿದ್ದಂತೆಯೇ ಜನರು ಆಕ್ಸಿಜನ್ ಸಿಲಿಂಡರ್, ರೆಮಿಡಿಸಿವರ್ನ ಹುಡುಕಾಟ ಶುರು ಮಾಡಿಬಿಡ್ತಾರೆ ಎಂದು ಗುಲೇರಿಯಾ ಹೇಳಿದ್ರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ವೈದ್ಯ ನರೇಶ್, ಆರ್ಟಿ – ಪಿಸಿಆರ್ ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬರುತ್ತಿದ್ದಂತೆಯೇ ಹತ್ತಿರದ ವೈದ್ಯರ ಸಂಪರ್ಕದಲ್ಲಿರಿ ಎಂದು ಹೇಳಿದ್ರು.
ನಾವು ಸೋಂಕನ್ನ ಸೋಲಿಸಿದ್ರೆ ಆರೋಗ್ಯ ಸಿಬ್ಬಂದಿಯನ್ನ ಕಾಪಾಡಿದಂತೆ ಎಂದು ಡಾ. ನವೀತ್ ಹೇಳಿದ್ದಾರೆ. ಅನೇಕ ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ನಾವು ಆರೋಗ್ಯ ಸಿಬ್ಬಂದಿಯನ್ನ ಕಾಪಾಡಿದ್ರೆ ಮಾತ್ರ ಅವರು ಜನರ ರಕ್ಷಣೆ ಮಾಡೋಕೆ ಸಾಧ್ಯ. ಹೀಗಾಗಿ ಕೊರೊನಾ ಚೈನ್ ಬ್ರೇಕ್ ಮಾಡಲು ನೆರವಾಗಿ ಎಂದು ಅವರು ಹೇಳಿದ್ರು.