ಪೋಷಕರ ಜೊತೆ ಮುಂಬೈನಿಂದ ಲಕ್ನೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 8 ವರ್ಷದ ಬಾಲಕಿ ಹಠಾತ್ ಸಾವಿಗೀಡಾದ ಆಘಾತಕಾರಿ ಘಟನೆ ಸಂಭವಿಸಿದೆ. ವಿಮಾನವನ್ನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಉತ್ತರ ಪ್ರದೇಶದ ಸಿದ್ದಾರ್ಥ ನಗರ ಜಿಲ್ಲೆಯ ಸಹೇರಿ ಖಾಸ್ ಗ್ರಾಮದ ಬಾಲಕಿಯನ್ನ ಆಕೆಯ ಪೋಷಕರು ವೈದ್ಯಕೀಯ ತಪಾಸಣೆಗಾಗಿ ಲಕ್ನೋದಿಂದ ಮುಂಬೈಗೆ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ವಿಮಾನ ಹಾರಾಟದ ನಡುವೆಯೇ ಬಾಲಕಿಗೆ ಹೃದಯಾಘಾತ ಸಂಭವಿಸಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ .
8 ವರ್ಷದ ಬಾಲಕಿ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು ಈ ವಿಚಾರವನ್ನ ಬಾಲಕಿಯ ತಂದೆ ವಿಮಾನ ನಿಲ್ದಾಣದ ಯಾವುದೇ ಸಿಬ್ಬಂದಿಗೂ ಹೇಳಿರಲಿಲ್ಲ. ಹಿಮೋಗ್ಲೋಬಿನ್ ಅಂಶ 8 ರಿಂದ 10 ಗ್ರಾಂ ಗಿಂತ ಕಡಿಮೆ ಇದ್ದರೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಲ್ಲ. ಬಾಲಕಿ 2.5 ಗ್ರಾಂ ಹಿಮೋಗ್ಲೋಬಿನ್ ಹೊಂದಿದ್ದಳು. ಈ ಬಗ್ಗೆ ಆಕೆಯ ತಂದೆ ಕೂಡ ಮಾಹಿತಿ ನೀಡಿರಲಿಲ್ಲ.
ವಿಮಾನಯಾನದ ಮಧ್ಯೆಯೇ ಆಕೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಡಲು ಆರಂಭವಾಗಿತ್ತು. ಕೂಡಲೇ ವಿಮಾನವನ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ಕನ್ಫರ್ಮ್ ಮಾಡಿದ್ದಾರೆ.