ಲೈಂಗಿಕವಾಗಿ ಹಲ್ಲೆ ಮಾಡಿದ ಪುರುಷನಿಗೆ ರಾಖಿ ಕಟ್ಟಲು ಸಂತ್ರಸ್ತೆಗೆ ಸೂಚಿಸಿದ ಮಧ್ಯ ಪ್ರದೇಶ ಹೈಕೋರ್ಟ್‌ನ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳ ಪ್ರಕರಣಗಳ ಆಲಿಕೆ ನಡೆಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಒಂಬತ್ತು ವಕೀಲೆಯರು ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸುಪ್ರೀಂ ಕೋರ್ಟ್, “ಇಂಥ ತೀರ್ಪುಗಳು ಸಂತ್ರಸ್ತೆಯರು ಅನುಭವಿಸಿದ ನೋವನ್ನು ನಿರ್ಲಕ್ಷಿಸುತ್ತವೆ” ಎಂದಿದ್ದು, ಇಂಥ ಪ್ರಕರಣಗಳಲ್ಲಿ ಪೂರ್ವಾಗ್ರಹಿಕೆಯನ್ನು ಬಿಟ್ಟು ನ್ಯಾಯಾಧೀಶರು ಹಾಗೂ ವಕೀಲರು ಸೂಕ್ಷ್ಮ ಸಂವೇದನೆ ಬೆಳೆಸಿಕೊಳ್ಳಲು ಸೂಚಿಸಿದೆ.
ಆ ಮಾರ್ಗಸೂಚಿಗಳು ಇಂತಿವೆ:
1. ಜಾಮೀನು ನೀಡಲು ಆಪಾದಿತ ಹಾಗೂ ಸಂತ್ರಸ್ತರ ನಡುವೆ ಸಂಪರ್ಕ ಇರಬೇಕೆಂದು ಷರತ್ತು ಇಡುವಂತಿಲ್ಲ. ಇಂಥ ಷರತ್ತುಗಳು ಆಪಾದಿತನಿಂದ ಸಂತ್ರಸ್ತರಿಗೆ ರಕ್ಷಣೆ ಕೊಡಲು ಪೂರಕವಾಗಿರಬೇಕು.
2. ಸಂತ್ರಸ್ತರ ಮೇಲೆ ಕಿರುಕುಳ ಸಂಭವಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಅನಿಸಿದಲ್ಲಿ, ಪೊಲೀಸರಿಂದ ಈ ಸಂಬಂಧ ಸೂಕ್ತ ವರದಿ ತರಿಸಿಕೊಂಡು, ಸಂತ್ರಸ್ತರಿಗೆ ರಕ್ಷಣೆ ಒದಗಿಸಲು ಪ್ರತ್ಯೇಕ ಮಾನದಂಡಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಸಂತ್ರಸ್ತೆಯೊಂದಿಗೆ ಸಂಪರ್ಕಕ್ಕೆ ಬಾರದಂತೆ ಆಪಾದಿತರಿಗೆ ಸೂಚನೆ ಕೊಡಬೇಕು.
3. ಜಾಮೀನು ಕೊಡಲಾದ ಎಲ್ಲ ಪ್ರಕರಣಗಳಲ್ಲೂ, ದೂರುದಾರರಿಗೆ ಈ ಬಗ್ಗೆ ಮಾಹಿತಿ ಕೊಡಬೇಕು ಹಾಗೂ ಜಾಮೀನು ಕೊಟ್ಟ ಆದೇಶದ ಪ್ರತಿಯನ್ನು ಕೊಡಬೇಕು.
ಅಂಚೆ ಕಚೇರಿ ಖಾತೆದಾರರಿಗೆ ಮಹತ್ವದ ಸುದ್ದಿ….! ಏ.1ರಿಂದ ಬದಲಾಗಲಿದೆ ಈ ಎಲ್ಲ ನಿಯಮ
4. ಜಾಮೀನಿನ ಷರತ್ತುಗಳನ್ನು ವಿಧಿಸುವ ವೇಳೆ ಮಹಿಳೆಯರ ಬಗ್ಗೆ ಸಮಾಜದಲ್ಲಿ ಇರುವ ಪೂರ್ವಾಗ್ರಹಗಳನ್ನು ಪರಿಗಣಿಸಬಾರದು ಹಾಗೂ ಕ್ರಿಮಿನಲ್ ದಂಡ ಸಂಹಿತೆಯ ಅನ್ವಯ ಪ್ರಕ್ರಿಯೆ ನಡೆಯಬೇಕು. ಧರಿಸುವ ಬಟ್ಟೆ, ವರ್ತನೆ, ಹಿಂದಿನ ವರ್ತನೆಗಳು ಹಾಗೂ ನೈತಿಕತೆಗಳ ಕುರಿತಂತೆ ಜಾಮೀನು ನೀಡುವ ವೇಳೆ ಚರ್ಚಿಸಬಾರದು.
5. ಇಂಥ ಅಪರಾಧಗಳ ವಿಚಾರದಲ್ಲಿ ತೀರ್ಪು ನೀಡುವ ವೇಳೆ ದೂರುದಾರರು ಹಾಗೂ ಆಪಾದಿತರ ನಡುವೆ ಮದುವೆ ಮಾಡಿಸುವುದು, ರಾಜಿ ಮಾಡಿಕೊಳ್ಳಲು ಒತ್ತಡ ಹೇರುವಂಥ ಸೂಚನೆಗಳನ್ನು ಕೊಡುವುದು ನ್ಯಾಯಾಲಯಗಳ ಅಧಿಕಾರದ ವ್ಯಾಪ್ತಿಯ ಹೊರಗೆ ಇರುವಂಥವು.
6. ವಾದ-ವಿವಾದಗಳ ಆಲಿಕೆ ವೇಳೆ ದೂರುದಾರರು/ಸಂತ್ರಸ್ತರಿಗೆ ಯಾವುದೇ ರೀತಿಯ ನೋವಾಗುವಂಥ ವಿಚಾರಣೆ ಮಾಡದಂತೆ ಸೂಕ್ಷ್ಮ ಸಂವೇದನೆಯನ್ನು ನ್ಯಾಯಾಧೀಶರು ಖಾತ್ರಿಪಡಿಸಬೇಕು.
7. ನ್ಯಾಯಾಲಯದ ನಿಷ್ಪಕ್ಷಪಾತವನ್ನು ಎತ್ತಿ ಹಿಡಿಯುವ ಸ್ಪೂರ್ತಿಯನ್ನು ಮೆರೆಯುವ ಮೂಲಕ ನ್ಯಾಯಾಧೀಶರು ಯಾವುದೇ ರೀತಿಯ ಪದ ಬಳಕೆ, ಲಿಖಿತ ಅಥವಾ ಮೌಖಿಕ ಮೂಲಕ ಸಂತ್ರಸ್ತರ ಆತ್ಮಸ್ಥೈರ್ಯ ಅಡುಗಿಸುವಂಥ ಕೆಲಸ ಮಾಡಬಾರದು.