ನೂರಾರು ಕಿಮೀ ನಡೆದುಕೊಂಡು ತೀರ್ಥಯಾತ್ರೆ ಮಾಡುವ ಜನರ ಬಗ್ಗೆ ಸಾಕಷ್ಟು ಕೇಳಿದ್ದೇವೆ. ದೈವಭಕ್ತಿಯ ಮುಂದೆ ಅಷ್ಟು ದೂರದ ನಡಿಗೆಯೆಲ್ಲಾ ಏನೂ ಪ್ರಯಾಸ ಎನಿಸುವುದೇ ಇಲ್ಲವೇನೋ ಎಂಬಂತೆ ಭಕ್ತಗಣದ ಉತ್ಸಾಹವಿರುವುದನ್ನೂ ಸಹ ನೋಡಿದ್ದೇವೆ.
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 68 ವರ್ಷ ವಯಸ್ಸಿನ ವೈಷ್ಣೋದೇವಿ ಭಕ್ತೆಯೊಬ್ಬರು ಒಬ್ಬರೇ 2,200 ಕಿಮೀ ಬೈಸಿಕಲ್ ತುಳಿದುಕೊಂಡು ತಮ್ಮ ಆರಾಧ್ಯ ದೇವಿಯ ದರ್ಶನ ಪಡೆಯಲು ಕಟ್ರಾದತ್ತ ಪಯಣ ಬೆಳೆಸಿದ್ದಾರೆ. ಈ ಮಹಿಳೆ ವೈಷ್ಣೋದೇವಿ ಮಂದಿರದತ್ತ ಬೈಸಿಕಲ್ ತುಳಿದುಕೊಂಡು ಸಾಗುತ್ತಿದ್ದ ವೇಳೆ ವಿಡಿಯೋವೊಂದನ್ನು ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಕಂಡ ಬಹಳಷ್ಟು ಮಂದಿ ಆ ಮಹಿಳೆಯ ಭಕ್ತಿಗೆ ಮೆಚ್ಚಿಕೊಂಡಿದ್ದರೆ ಇನ್ನೂ ಕೆಲವರು, ಆಕೆಯ ಸಂಬಂಧಿಕರು ಅಥವಾ ಮಕ್ಕಳು ತೀರ್ಥಯಾತ್ರೆಯ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕಿತ್ತು ಎಂದಿದ್ದಾರೆ.