ನವದೆಹಲಿ: ಬೆಲೆ ಹೆಚ್ಚಳ ಹಾಗೂ ಅಲಭ್ಯತೆಯ ಕಾರಣ ಲಾಕ್ಡೌನ್ ಅವಧಿಯಲ್ಲಿ ದೇಶದಲ್ಲಿ ಶೇ.68 ರಷ್ಟು ಧೂಮಪಾನಿಗಳು ಸಿಗರೇಟ್ ಸೇದುವುದನ್ನು ಕಡಿಮೆ ಮಾಡಿದ್ದಾರೆ.
ಇಂಡಸ್ ಹೆಲ್ತ್ ಪ್ಲಸ್ ( ಐಎಚ್ ಪಿ)ಎಂಬ ಅಧಿಕೃತ ಆರೂಗ್ಯ ಸುರಕ್ಷತಾ ಕಂಪನಿ ಈ ಸರ್ವೇ ಕೈಗೊಂಡಿದೆ.
ಧೂಮಪಾನಿಗಳ ವರ್ತನೆ ಹಾಗೂ ಸ್ವರೂಪದ ಬಗ್ಗೆ ಅರಿಯಲು ಕಂಪನಿ ತಮ್ಮ ಆರೋಗ್ಯ ರಕ್ಷಾ ಪಾರ್ಟ್ನರ್ ಗಳ ಮೂಲಕ ಲಾಕ್ಡೌನ್ ಸಮಯದ ಮೂರು ವಾರ (ಮೇ 8 ರಿಂದ 29 ರವರೆಗೆ) ಸರ್ವೇ ಕಾರ್ಯ ಕೈಗೊಂಡಿದೆ.
30 ರಿಂದ 45 ವರ್ಷದ 837 ಧೂಮಪಾನಿಗಳ ಸರ್ವೇ ನಡೆಸಲಾಗಿತ್ತು. ಅದರಲ್ಲಿ ಶೇ.31 ರಷ್ಟು ಮಹಿಳೆಯರು ಹಾಗೂ ಶೇ. 69 ರಷ್ಟು ಪುರುಷರು ಇದ್ದರು. ಈ ಪೈಕಿ ಶೇ. 39 ರಷ್ಟು ಪುರುಷರು ಹಾಗೂ ಶೇ. 25 ರಷ್ಟು ಮಹಿಳೆಯರು ತಂಬಾಕು ಉತ್ಪನ್ನ ಬಳಕೆಯನ್ನು ಕಡಿಮೆ ಮಾಡಿದ್ದಾರೆ ಎಂದು ಸರ್ವೇ ಹೇಳಿದೆ.
ಅಲ್ಲದೆ, ವರ್ಕ್ ಫ್ರಂ ಹೋಂ ಹಾಗೂ ಇತರ ಒತ್ತಡದ ಕಾರಣಕ್ಕೆ ಶೇ.32 ರಷ್ಟು ಜನರ ಸಿಗರೇಟ್ ಸೇವನೆ ಪ್ರಮಾಣ ಹೆಚ್ಚಿದೆ. ಸಿಗರೇಟ್ ಬಿಡಲು ಇದು ಒಳ್ಳೆಯ ಅವಕಾಶ ಎಂದು ಶೇ. 37ರಷ್ಟು ಜನ ಹೇಳಿದ್ದಾರೆ. ಶೇ.42 ರಷ್ಟು ಜನರು ಧೂಮಪಾನ ಕಡಿಮೆ ಮಾಡುವುದಾಗಿ ಹೇಳಿದ್ದಾರೆ.
“ಈ ಲಾಕ್ಡೌನ್ ಧೂಮಪಾನಿಗಳಲ್ಲಿ ಭಾರೀ ಬದಲಾವಣೆ ತಂದಿದೆ. ಧೂಮಪಾನ ಬಿಡುವ ಮಾರ್ಗಗಳ ಬಗ್ಗೆ ಹುಡುಕುವಂತೆ ಮಾಡಿದೆ” ಎಂದು ಖಾಸಗಿ ಹೆಲ್ತ್ ಕೇರ್ ಸ್ಪೆಷಲಿಸ್ಟ್ ಅಮೋಲ್ ನಾಯಕವಾಡಿ ತಿಳಿಸಿದ್ದಾರೆ.