ಭಾರತವು ಕೊರೊನಾದ ವಿರುದ್ಧ ಹೋರಾಡುತ್ತಿದೆ. ಕೊರೊನಾ ಎರಡನೆ ಅಲೆಯಿಂದ ಬಳಲುತ್ತಿರುವ ಅನೇಕರಿಗೆ ಸೋಶಿಯಲ್ ಮೀಡಿಯಾದ ಮೂಲಕ ನೆರವಿನ ಮಹಾಪೂರವೇ ಹರಿದುಬರ್ತಿದೆ.
ಅವಶ್ಯಕತೆ ಇರುವವರಿಗೆ ಬೆಡ್, ಆಮ್ಲಜನಕ ಹಾಗೂ ಔಷಧಿಗಳ ಪೂರೈಕೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಇದೇ ರೀತಿ ಖಾಸಗಿ ಕಂಪನಿಯೊಂದರ 65 ವರ್ಷದ ನಿವೃತ್ತ ನೌಕರ ಮೋಹನ್ ಕುಲಕರ್ಣಿ ತಮ್ಮ ಪಿಂಚಣಿ ಹಣದಲ್ಲಿ ಉಳಿಸಿದ್ದ ನಾಲ್ಕು ಲಕ್ಷ ರೂಪಾಯಿ ಜೊತೆಗೆ 2.5 ಲಕ್ಷ ರೂಪಾಯಿ ಸಾಲ ಪಡೆದು ಈ ಹಣವನ್ನ ಅಂಬರ್ನಾಥ್ ಆಸ್ಪತ್ರೆಗೆ ವೆಂಟಿಲೇಟರ್ ಖರೀದಿ ಮಾಡಲು ನೀಡಿದ್ದಾರೆ.
ಮಹಾರಾಷ್ಟ್ರ, ಕೊರೊನಾ ಮೊದಲ ಅಲೆಯಂತೆ ಎರಡನೇ ಅಲೆಯಿಂದಲೂ ತತ್ತರಿಸಿ ಹೋಗಿದೆ. ಅಂಬರ್ನಾಥ್ನಲ್ಲೂ ದಿನಕ್ಕೆ 400 ಕೊರೊನಾ ಕೇಸ್ಗಳು ವರದಿಯಾಗುತ್ತಿವೆ. ಈ ನಡುವೆ ಕೆಲ ನಗರ ಆಸ್ಪತ್ರೆಗಳು ಕೊರೊನಾ ವಿರುದ್ಧ ಇನ್ನಿಲ್ಲದ ಶ್ರಮ ಪಟ್ಟು ಹೋರಾಡುತ್ತಿದೆ.
ಸ್ಥಳೀಯ ನಗರ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಉಪಕರಣಗಳ ಕೊರತೆ ಉಂಟಾಗಿದ್ದು ಕೈಗಾರಿಕೋದ್ಯಮಿಗಳು ದಯಮಾಡಿ ಧನಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಈ ಮನವಿ ಬಳಿಕ ನಿವೃತ್ತ ನೌಕರ ಕುಲಕರ್ಣಿ ತನ್ನೆಲ್ಲ ಉಳಿತಾಯದ ಹಣದ ಜೊತೆಗೆ ಇನ್ನೂ ಸ್ವಲ್ಪ ಹಣವನ್ನ ಸಾಲ ಮಾಡಿ ಆಸ್ಪತ್ರೆಗೆ ನೀಡಿದ್ದಾರೆ.
ಕುಲಕರ್ಣಿ ಮೊದಲು ಆಂಬುಲೆನ್ಸ್ ನೀಡಲು ನಿರ್ಧರಿಸಿದ್ದರು ಆದರೆ ಬಳಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ ಎಂದು ತಿಳಿದ ಬಳಿಕ ಈ ಹಣವನ್ನ ವೆಂಟಿಲೇಟರ್ಗೆ ನೀಡಿದ್ದಾರೆ. ತೀರಾ ಇತ್ತೀಚಿಗೆ ಕಾಂಜುಮಾರ್ಗ್ಗೆ ಶಿಫ್ಟ್ ಆಗಿದ್ದ ಕುಲಕರ್ಣಿ ಕೆಲ ವರ್ಷಗಳ ಹಿಂದೆಯಷ್ಟೇ ಕ್ಯಾನ್ಸರ್ನಿಂದ ಪತ್ನಿಯನ್ನ ಕಳೆದುಕೊಂಡಿದ್ದರು.