ಏರ್ ಇಂಡಿಯಾ ವಿಮಾನದ ಮೂಲಕ ಕಳೆದ ರಾತ್ರಿ ಲಂಡನ್ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬ್ರಿಟೀಷ್ ಏರ್ವೇಸ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದ ಪ್ರಯಾಣಿಕರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಬ್ರಿಟನ್ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡ ಬೆನ್ನಲ್ಲೇ ಯುಕೆಗೆ ಎಲ್ಲಾ ವಿಮಾನಯಾನಗಳನ್ನ ಭಾರತ ರದ್ದು ಮಾಡಿತ್ತು. ಆದರೆ ಇದೀಗ ಈ ಆರು ಮಂದಿಗೆ ಸೋಂಕು ದೃಢಪಟ್ಟಿದ್ದು ಆತಂಕ ಹೆಚ್ಚಾಗಿದೆ. ಡಿಸೆಂಬರ್ 31ರವರೆಗೂ ಬ್ರಿಟನ್ಗೆ ವಿಮಾನಯಾನವನ್ನ ಭಾರತ ಸರ್ಕಾರ ರದ್ದುಗೊಳಿಸಿದೆ.
ಏರ್ ಇಂಡಿಯಾ ವಿಮಾನದ ಮೂಲಕ 266 ಪ್ರಯಾಣಿಕರು ಸೋಮವಾರ ರಾತ್ರಿ 10:40ರ ಸುಮಾರಿಗೆ ಬಂದಿಳಿದಿದ್ರು. ಇವರನ್ನ ಕೂಡಲೇ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ ಆರು ಮಂದಿಗೆ ಸೋಂಕು ದೃಢಪಟ್ಟಿದೆ.
ಬ್ರಿಟನ್ನಿಂದ ಬಂದಿಳಿದ ಅಥವಾ ಬ್ರಿಟನ್ನಲ್ಲಿ ಲ್ಯಾಂಡ್ ಆಗಿದ್ದ ವಿಮಾನದಲ್ಲಿ ಪ್ರಯಾಣಿಸಿದವರಿಗೂ ನಾವು ಕೊರೊನಾ ಪರೀಕ್ಷೆ ನಡೆಸಿದ್ದು ಇದರಲ್ಲಿ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.
ಇವರಿಗೆ ರೂಪಾಂತರಗೊಂಡ ವೈರಸ್ ತಾಕಿದೆ ಎಂದು ಈಗಲೇ ನಿರ್ಧಾರ ಮಾಡೋದು ತಪ್ಪಾಗುತ್ತೆ. ಇವರ ಮಾದರಿಯನ್ನ ಎನ್ಐವಿ ಪುಣೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.