ದೇಶದಲ್ಲಿ ಕೊರೊನಾ ವೈರಸ್ ಇನ್ನೂ ಇರುವಾಗಲೇ ನಡೆಸಿದ ಸಾಕಷ್ಟು ಚುನಾವಣಾ ರ್ಯಾಲಿಗಳು ಇದೀಗ ಕೊರೊನಾ ಎರಡನೇ ಅಲೆಗೆ ಪರೋಕ್ಷ ಕಾರಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ನಡೆಸಲಾದ ಚುನಾವಣಾ ಪ್ರಚಾರ ಕಾರ್ಯ ಇದೀಗ ಭಾರೀ ಹೊಡೆತ ನೀಡಿದೆ.
ಚುನಾವಣೆಯ ಕಾರಣದಿಂದಲೇ ಕೊರೊನಾ ವೈರಸ್ ಭೀಕರತೆ ಹೆಚ್ಚಾಯ್ತಾ ಎಂಬ ಗೊಂದಲಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಕರ್ತವ್ಯದಲ್ಲಿದ್ದ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳ ಪೈಕಿ 577 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಎದುರಾಗಿದೆ.
ಇನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿಯೂ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜೊತೆ ಭಾಗಿಯಾಗಿದ್ದ ಬೆಂಬಲಿಗರಲ್ಲಿ ಅನೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಅನೇಕರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶ ಶಿಕ್ಷಖರ ಸಂಘವು ಕೊರೊನಾದಿಂದ ಮೃತರಾದ 577 ಮಂದಿಯ ಪಟ್ಟಿಯನ್ನ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಇವೆರಲ್ಲರೂ ಶಿಕ್ಷಕ ಸಹೋದ್ಯೋಗಿಗಳಾಗಿದ್ದು ಚುನಾವಣಾ ಕರ್ತವ್ಯದ ಬಳಿಕ ಕೊರೊನಾ ಬಂದಿದ್ದು ಸಾವಿಗೀಡಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೇ ಮೇ 2ರಂದು ನಡೆಯಲಿರುವ ಮತ ಎಣಿಕೆ ಕಾರ್ಯಗಳಿಂದಲೂ ದೂರ ಇರುವಂತೆ ಈ ಸಂಘ ಎಲ್ಲಾ ಶಿಕ್ಷಕರಲ್ಲಿ ಮನವಿ ಮಾಡಿದೆ. ಮಂಗಳವಾರ ಅಲಹಾಬಾದ್ ಹೈಕೋರ್ಟ್ ಕೋವಿಡ್ ಸಾವುಗಳ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.