ತಿರುವನಂತಪುರಂ: ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲು ಕೇರಳ ಸರ್ಕಾರ ಮುಂದಾಗಿದ್ದು, ಇದಕ್ಕೆ ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿದೆ.
ಕಾನೂನಿಗೆ ತಿದ್ದುಪಡಿ ತಂದು ಪೊಲೀಸರಿಗೆ ಹೆಚ್ಚಿನ ಬಲ ನೀಡಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಎಲ್.ಡಿ.ಎಫ್. ಸರ್ಕಾರ ಮುಂದಾಗಿದ್ದು, ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ಕಠಿಣ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ.
ಕೇರಳ ಸರ್ಕಾರ ಆಕ್ಷೇಪಾರ್ಹ ಅಥವಾ ಬೆದರಿಕೆ ಎಂದು ಪರಿಗಣಿಸುವ ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಸೈಬರ್ ಕೃತ್ಯಗಳಿಗೆ ಜೈಲು ಶಿಕ್ಷೆ ವಿಧಿಸುವ ಪೊಲೀಸ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಹೀಗೆ ತಿದ್ದುಪಡಿ ಮಾಡಲಾದ ಕಠಿಣ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
118(ಎ) ಹೊಸ ವಿಭಾಗವನ್ನು ಒಳಗೊಂಡ ಕೇರಳ ಪೊಲೀಸ್ ಕಾಯ್ದೆಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ಅವರ ಕಚೇರಿ ದೃಢಪಡಿಸಿದೆ. ಯಾವುದೇ ವ್ಯಕ್ತಿಯು ದುರುದ್ದೇಶ ಬೆದರಿಕೆ ರೂಪದ ಸಂದೇಶಗಳನ್ನು ರವಾನಿಸಿದರೆ 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಈ ತಿದ್ದುಪಡಿ ಪೊಲೀಸರಿಗೆ ಹೆಚ್ಚಿನ ಶಕ್ತಿ ನೀಡುವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಿಂದಿಸುವುದರಿಂದ ನಿಯಮ ರೂಪಿಸಲು ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.