ಲಾಕ್ ಡೌನ್ ಸಮಯದಲ್ಲಿ ಶೇ.42 ರಷ್ಟು ಗ್ರಾಹಕರು ಚಾಕೊಲೇಟ್ ಖರೀದಿಸಿ ದಾಸ್ತಾನು ಮಾಡಿದ್ದಾರೆ. ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಧ್ಯಯನ ವರದಿಯು ಈ ಅಂಶವನ್ನು ಬಹಿರಂಗಪಡಿಸಿದ್ದು, ಲಾಕ್ ಡೌನ್ ಅವಧಿಯಲ್ಲಿ ಜನರು ಏನೆಲ್ಲ ಖರೀದಿಸಿ ದಾಸ್ತಾನು ಮಾಡಿದರು ? ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು ? ಹೇಗೆಲ್ಲ ಕಾಲ ಕಳೆದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಮಕ್ಕಳನ್ನ ಖುಷಿಯಾಗಿಡುವುದಕ್ಕಾಗಿ ಈ ಪ್ರಮಾಣದ ಚಾಕೊಲೇಟ್ ಖರೀದಿಸಿ ಇಟ್ಟುಕೊಂಡಿದ್ದರು. ಇನ್ನು ಎರಡನೇ ಅವಧಿಗೆ ಲಾಕ್ ಡೌನ್ ಮುಂದುವರಿಯುವ ವೇಳೆಗೆ ಮತ್ತಷ್ಟು ಚಾಕೊಲೇಟ್ ಖರೀದಿಸಿದ್ದು, ಸಾಧಾರಣವಾಗಿ ಖರೀದಿಸುತ್ತಿದ್ದ ಬ್ರ್ಯಾಂಡ್ ಗಳ ಬದಲು ಲಭ್ಯವಿದ್ದ ಬ್ರ್ಯಾಂಡ್ ನ್ನೇ ಶೇ.39 ಹಾಗೂ ನಂತರದಲ್ಲಿ ಶೇ.51 ರಷ್ಟು ಗ್ರಾಹಕರು ಖರೀದಿಸಿಟ್ಟುಕೊಂಡರು.
ಇನ್ನು ಶೇ.75 ರಷ್ಟು ಗ್ರಾಹಕರು ಅಕ್ಕಿ ದಾಸ್ತಾನು ಮಾಡಿದರೆ, ಶೇ.65 ರಷ್ಟು ಗ್ರಾಹಕರು ಗೋಧಿ ಹಿಟ್ಟು ದಾಸ್ತಾನಿಟ್ಟಿದ್ದರು. ಸಸ್ಯಹಾರಿಗಳು ಆಲೂಗಡ್ಡೆ, ಈರುಳ್ಳಿಯಂತಹ ದೀರ್ಘಕಾಲ ಬಾಳಿಕೆಯ ತರಕಾರಿಗಳನ್ನು ಶೇಖರಿಸಿ ಇಟ್ಟಿದ್ದಾರೆ. ಶಾಪಿಂಗ್ ಅಭ್ಯಾಸ ಬಹುತೇಕ ಕಡಿಮೆ ಆಗಿದ್ದು, ಆರೋಗ್ಯ ಮತ್ತು ಶುಚಿತ್ವದ ಕಾಳಜಿ ಹೆಚ್ಚಾಗಿದೆ. ಶೇ.40 ರಷ್ಟು ಗ್ರಾಹಕರು ನ್ಯಾಪ್ಕಿನ್, ಟಿಶ್ಯು ಪೇಪರ್ ಸೇರಿ ಹೆಚ್ಚುವರಿಯಾಗಿ ಶುಚಿತ್ವದ ಪರಿಕರಗಳನ್ನು ಖರೀದಿಸಿದ್ದಾರೆ. ಶೇ.39 ರಷ್ಟು ಗ್ರಾಹಕರು ಸ್ಯಾನಿಟೈಸರ್ ಸೇರಿ ವಿವಿಧ ನಮೂನೆಯ ಸೋಂಕು ನಿವಾರಕಗಳನ್ನು ಕೊಂಡುಕೊಂಡಿದ್ದಾರೆ.
ಆರೋಗ್ಯವರ್ಧಕ ಮಾತ್ರೌಷಧಿಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥಗಳು, ವಿಟಮಿನ್ ಸಿ ನೀಡುವ ಬೆಟ್ಟದ ನೆಲ್ಲಿಕಾಯಿ ಇತ್ಯಾದಿಗಳ ಖರೀದಿ ಜಾಸ್ತಿಯಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಜನ ಹೇಗೆ ಕಾಲ ಕಳೆದರು ಎಂಬ ಬಗ್ಗೆಯೂ ಅಧ್ಯಯನ ನಡೆಸಿದ್ದು, ಮಹಾನಗರ ಹಾಗೂ 1 ಮತ್ತು 2 ಹಂತದ ನಗರಗಳ 931 ಮಂದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಶೇ.53 ರಷ್ಟು ಜನರು ಟಿವಿ ನೋಡುತ್ತಾ ಕಾಲ ಕಳೆದರೆ, ಶೇ.45 ರಷ್ಟು ಮಂದಿ ಆನ್ ಲೈನ್ ಹಾಗೂ ನಿದ್ರೆ ಮಾಡುವ ಮೂಲಕ ಕಾಲ ಕಳೆದಿದ್ದಾರಂತೆ. ಶೇ.44 ರಷ್ಟು ಜನರು ಅಡುಗೆ ಮನೆಯಲ್ಲಿ ಹೊಸರುಚಿಗಳನ್ನ ಮಾಡಿ ಸವಿದರೆ, ಶೇ.24 ರಷ್ಟು ಮಂದಿ ಪುಸ್ತಕ, ಓದು, ವಾರ್ತೆ, ಸುದ್ದಿವಾಹಿನಿ ನೋಡಿದ್ದಾರೆ. ಶೇ.20 ರಷ್ಟು ಮಂದಿ ಧ್ಯಾನ, ಪ್ರಾರ್ಥನೆ ಕೈಗೊಂಡಿದ್ದರಂತೆ.