ವಾತಾವರಣದಲ್ಲಿನ ಏರುಪೇರಿನ ಕಾರಣಕ್ಕೋ ಏನೋ ಹಾವು ಕಂಡೀಶನರ್ ಒಳಗಡೆ ಮೊಟ್ಟೆ ಇಟ್ಟು, ಮರಿಗಳಿಗೆ ಆಶ್ರಯ ಕೊಟ್ಟಿದೆ. ಇಂಥದ್ದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೀರತ್ ನ ಪಾವ್ಲಿ ಖೂರ್ದ ಗ್ರಾಮದ ರೈತ ಶ್ರದ್ಧಾನಂದ ಅವರು ತಮ್ಮ ಮನೆಯ ಕೋಣೆಯಲ್ಲಿ ಹಾವಿನ ಮರಿಗಳು ಹರಿದಾಡುತ್ತಿರುವುದನ್ನು ಕಂಡರು. ಬಳಿಕ ಅದನ್ನು ಮನೆಯ ಹೊರಗೆ ಬಿಟ್ಟು ಬಿಟ್ಟರು
ಸ್ವಲ್ಪ ಸಮಯದ ನಂತರ ಮಲಗುವ ಕೋಣೆಯಲ್ಲಿ ಹೋದಾಗ ಅವರಿಗೆ ಹಾಸಿಗೆ ಮೇಲೆ ಇನ್ನಷ್ಟು ಮರಿ ಕಂಡುಬಂದಿವೆ. ಇದರಿಂದ ಗಾಬರಿಗೊಂಡ ಅವರ ಗಮನ ಏರ್ ಕಂಡೀಷನರ್ ನತ್ತ ಹರಿದಿದೆ. ಅದರ ಪೈಪ್ ಪರಿಶೀಲಿಸಿದಾಗ ಮತ್ತಷ್ಟು ಮರಿ ಕಂಡಿದೆ. ಬರೋಬ್ಬರಿ ನಲವತ್ತು ಮರಿಗಳು ಸಿಕ್ಕಿವೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅವರ ಮನೆಗೆ ಧಾವಿಸಿ ಬಂದಿದ್ದಾರೆ. ನಂತರ ಒಂದು ಚೀಲದಲ್ಲಿ ಎಲ್ಲ ಮರಿಗಳನ್ನು ಹಾಕಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಈಗ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕೆಲದಿನಗಳ ಕಾಲ ಏರ್ ಕಂಡಿಷನರ್ ಬಳಸದ ಕಾರಣ ಹಾವು ಪೈಪ್ ನಲ್ಲಿ ಮೊಟ್ಟೆ ಇಟ್ಟಿರಬಹುದು, ಈಗ ಮರಿ ಹೊರಬರುತ್ತಿವೆ ಎಂದು ಸ್ಥಳೀಯ ಪಶು ವೈದ್ಯರು ತಿಳಿಸಿದ್ದಾರೆ.