ಆಘಾತಕಾರಿ ಘಟನೆಯೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರಿಗೆ ತಿಳಿಹೇಳಿದ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಜನವರಿ 1 ರಂದು ಈ ಘಟನೆ ನಡೆದಿದ್ದು 35 ವರ್ಷದ ಸಚಿನ್ ಪಾಟೀಲ್ ಮೃತ ವ್ಯಕ್ತಿ. ಆಕಾಶ್ ಗಾಯಕ್ವಾಡ್ ಎಂಬ ಯುವಕ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಇದಕ್ಕೆ ಸಚಿನ್ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಆಕಾಶ್ ಗಾಯಕ್ವಾಡ್ ತನ್ನ ಮೂವರು ಸ್ನೇಹಿತರೊಂದಿಗೆ ಬಂದು ಸಚಿನ್ ಪಾಟೀಲ್ ಮೇಲೆ ಸಾಠೆ ನಗರದಲ್ಲಿ ಹಲ್ಲೆ ನಡೆಸಿದ್ದಾನೆ. ಇದರಿಂದ ಸಚಿನ್ ಪಾಟೀಲ್ ಕುಸಿದುಬಿದ್ದಿದ್ದು ಬಳಿಕ ಹಲ್ಲೆಕೋರರು ಪರಾರಿಯಾಗಿದ್ದಾರೆ.
ರಸ್ತೆಯಲ್ಲಿ ನರಳುತ್ತ ಬಿದ್ದಿದ್ದ ಸಚಿನ್ ಪಾಟೀಲ್ ನನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ. ಇದೀಗ ಆಕಾಶ್ ಗಾಯಕ್ವಾಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.