ಭಾರತಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಎಲ್ಲರಲ್ಲಿ ಭಯ ಹುಟ್ಟಿಸಿದೆ. ಸೋಮವಾರ ದೇಶದಲ್ಲಿ 96,517 ಹೊಸ ಪ್ರಕರಣಗಳು ದಾಖಲಾಗಿವೆ. ಭಾನುವಾರ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಒಟ್ಟು 12,684,477 ಸಕ್ರಿಯ ಪ್ರಕರಣಗಳಿವೆ. ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಪ್ರಸ್ತುತ ಕೊರೊನಾ ಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದರು. ಸಭೆಯಲ್ಲಿ ಕೊರೊನಾ ಹಠಾತ್ ಹೆಚ್ಚಾಗಲು ಮೂರು ಕಾರಣಗಳನ್ನು ಉಲ್ಲೇಖಿಸಲಾಗಿದೆ.
ಭಾರತದ 10 ರಾಜ್ಯಗಳ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಜನರ ನಿರ್ಲಕ್ಷ್ಯ, ಕೊರೊನಾ ತಡೆ ನಿಯಮ ಹಾಗೂ ನಿಬಂಧನೆಗಳನ್ನು ಕಡೆಗಣಿಸಿರುವುದು ಕೊರೊನಾ ವೇಗವಾಗಿ ಹರಡಲು ಮುಖ್ಯ ಕಾರಣವೆಂದು ಸಭೆಯಲ್ಲಿ ಹೇಳಲಾಗಿದೆ. ಇದಲ್ಲದೆ ಕೊರೊನಾದಿಂದ ಬೇಸತ್ತಿರುವ ಜನರು ಅದ್ರ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದಾರೆ. ಮತ್ತೊಂದು ಕಾರಣವೆಂದ್ರೆ ಕ್ಷೇತ್ರಮಟ್ಟದಲ್ಲಿ ಕೊರೊನಾ ತಡೆಗಟ್ಟುವ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕೊರತೆ ಎಂದು ಸಭೆಯಲ್ಲಿ ಹೇಳಲಾಗಿದೆ.
ಮಾಸ್ಕ್ ಧರಿಸುವ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯ ಕೊರೊನಾಗೆ ಮುಖ್ಯ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ದೊಡ್ಡ ಅಸ್ತ್ರವೆಂದು ಈ ಹಿಂದೆ ತಜ್ಞರು ಹೇಳಿದ್ದರು. ಮಾಸ್ಕ್ ಧರಿಸುವ ಮೊದಲು ಮಾಸ್ಕ್ ಬಗ್ಗೆ ಸರಿಯಾಗಿ ತಿಳಿದಿರಬೇಕಾಗುತ್ತದೆ. ಡಬ್ಲ್ಯುಎಚ್ ಒ ಈ ಬಗ್ಗೆ ಈ ಹಿಂದೆಯೇ ಮಾಹಿತಿ ನೀಡಿದೆ. ಮಾಸ್ಕ್ ಧರಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಮಾಸ್ಕ್ ತೆಗೆದ ನಂತ್ರವೂ ಕೈಗಳನ್ನು ತೊಳೆಯಬೇಕು. ಮಾಸ್ಕ್ ಮೂಗು, ಗಲ್ಲ, ಬಾಯಿಯನ್ನು ಸರಿಯಾಗಿ ಮುಚ್ಚಿರಬೇಕು. ಆಗಾಗ ಮಾಸ್ಕ್ ಮುಟ್ಟಬಾರದು. ಬಿಸಿ ನೀರಿನಲ್ಲಿ ಮಾಸ್ಕನ್ನು ಸ್ವಚ್ಛಗೊಳಿಸಬೇಕು.
ಇದ್ರ ಜೊತೆಗೆ ಸಾಮಾಜಿಕ ಅಂತರವನ್ನು ಅನುಸರಿಸಲಾಗ್ತಿಲ್ಲವೆಂದು ಸಭೆಯಲ್ಲಿ ಹೇಳಲಾಗಿದೆ. ಕೆಮ್ಮು, ಸೀನುವ ವ್ಯಕ್ತಿಗಳಿಂದ ದೂರವಿರಬೇಕು. ಸಾರ್ವಜನಿಕ ಸಭೆ ಸೇರಿದಂತೆ ಜನಸಂದಣಿ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಬೇಕು. ಇಬ್ಬರ ಮಧ್ಯೆ ಕನಿಷ್ಠ 1 ಮೀಟರ್ ಅಂತರವಿರಬೇಕು. ಅನಿವಾರ್ಯವಾದಾಗ ಜನಸಂದಣಿ ಪ್ರದೇಶದಲ್ಲಿ ಎಚ್ಚರಿಕೆಯಿಂದಿರಿ. ಕೊರೊನಾ ಪ್ರೋಟೋಕಾಲ್ ಅನುಸರಿಸಿ.
ಉದ್ಯಾನವನಗಳಿಗೆ ಹೋಗುವಾಗ ಸುರಕ್ಷತೆ ಬಗ್ಗೆ ಗಮನವಿರಲಿ. ಸೀನು, ಕೆಮ್ಮುವ ವ್ಯಕ್ತಿಯಿಂದ ದೂರವಿರಿ. ಹಿಂದೆ ನಡೆಯುವ ವೇಳೆ 4-5 ಮೀಟರ್ ಅಂತರ ಕಾಯ್ದುಕೊಳ್ಳಿ. ಬೈಕ್ ಓಡಿಸುವಾಗ 10 ಮೀಟರ್ ಅಂತರ ಕಾಯ್ದುಕೊಳ್ಳಿ.