ಉತ್ತರ ಪ್ರದೇಶದ ಅನಾಮಿಕ ಶುಕ್ಲ ಏಕಕಾಲದಲ್ಲಿ 25 ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಗ್ರಹಿಸಿದ್ದಾರೆ…!
ಅನಾಮಿಕ ಅವರು ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದು, ವಿಜ್ಞಾನ ಶಿಕ್ಷಕರಾಗಿದ್ದಾರೆ, ಇದೇ ವೇಳೆ ಅವರು ಏಕಕಾಲದಲ್ಲಿ ಅಂಬೇಡ್ಕರ್ ನಗರ, ಬಾಗಪತ್, ಅಲಿಘರ್, ಸಹರಾನ್ಪುರ, ಪ್ರಯಾಗ್ ರಾಜ್ ಮತ್ತು ಇತರ ಹಲವು ಜಿಲ್ಲೆಗಳನ್ನು ಕೆಲಸ ಮಾಡಿದ್ದಾರೆ ಎಂದು ದಾಖಲೆ ಹೇಳುತ್ತಿದೆ.
ಶಿಕ್ಷಕರ ಕಾರ್ಯನಿರ್ವಹಣೆ ಡೇಟಾಬೇಸ್ ತಯಾರಿಸುವಾಗ 25 ಕಡೆ ಒಬ್ಬ ಶಿಕ್ಷಕರು ಕೆಲಸ ಮಾಡಿದ ಸಂಗತಿ ಗಮನಕ್ಕೆ ಬಂದಿದೆ. ಇದೀಗ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಶಿಕ್ಷಕರ ರಿಯಲ್ ಟೈಮ್ ಹಾಜರಾತಿ ವ್ಯವಸ್ಥೆ ಇದ್ದಾಗಲೂ ಸಹ ಈ ಶಿಕ್ಷಕಿ ಇಷ್ಟೊಂದು ಕಡೆ ಹೇಗೆ ಕೆಲಸ ಮಾಡಿ ಸಂಬಳ ಪಡೆದರು ಎಂಬುದು ಅಚ್ಚರಿಯ ವಿಷಯವಾಗಿದೆ. 2020ರ ಫೆಬ್ರವರಿವರೆಗೆ ಅವರು ಹದಿಮೂರು ತಿಂಗಳ ಅವಧಿಯಲ್ಲಿ 1 ಕೋಟಿ ರೂ. ವೇತನ ಪಡೆದುಕೊಂಡಿದ್ದಾರೆ.
ಈ ಸುದ್ದಿ ನೆಟ್ಟಿಗರನ್ನು ಕಕ್ಕಾಬಿಕ್ಕಿ ಮಾಡಿದ್ದು ಒಬ್ಬ ಶಿಕ್ಷಕರು ಇಷ್ಟೊಂದು ಸಂಬಳ ಪಡೆಯಲು ಹೇಗೆ ಸಾಧ್ಯವಾಯಿತು? ಎಲ್ಲಾ ಶಾಲೆಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಹೇಗೆ ಅವಕಾಶ ಸಿಕ್ಕಿತು? ಎಂದು ಆಶ್ಚರ್ಯದ ಪ್ರಶ್ನೆಗಳನ್ನು ಹಾಕಿದ್ದಾರೆ.