
ಜೈಪುರ: ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು 2400 ವರ್ಷಗಳ ಹಳೆಯದಾದ ಮಮ್ಮಿಯನ್ನು 130 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಕ್ಸ್ ನಿಂದ ಹೊರ ತೆಗೆಯಲಾಗಿದೆ.
ಮ್ಯೂಸಿಯಂ ಒಳಗೆ ಮೊಳಕಾಲುವರೆಗೆ ನೀರು ಬಂದಿದೆ. ಇದರಿಂದ ಗ್ಲಾಸ್ ಬಾಕ್ಸ್ ಒಡೆದು ಅದರಿಂದ ಮಮ್ಮಿಯನ್ನು ಹೊರ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಸೆಂಟ್ರಲ್ ಮ್ಯೂಸಿಯಂನ ಮೇಲ್ವಿಚಾರಕ ಡಾ.ರಾಕೇಶ್ ಚೋಲಾಕ್ ಹೇಳಿದ್ದಾರೆ.
ಈಜಿಪ್ಟ್ ಪಾನೊಪೊಲೀಸ್ ನಗರದ ಅಖ್ಮಿನ್ ಪ್ರಾಂತ್ಯದ ಟುಟು ಎಂಬ ಮಹಿಳೆಯ ಮಮ್ಮಿ ಇದಾಗಿದ್ದು, 130 ವರ್ಷಗಳ ಹಿಂದೆ ಅಲ್ಲಿಂದ ರಾಜಸ್ತಾನಕ್ಕೆ ತರಲಾಗಿತ್ತು.