ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಡಾ.ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದ ರೋಗಿಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಯಲ್ಲಿ 150 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಲ್ಲಿ 125 ರೋಗಿಗಳಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯಲ್ಲಿದ್ದ ಜಂಬೋ ಆಕ್ಸಿಜನ್ ಸಿಂಡರ್ ಖಾಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಟ್ಯಾಂಕರ್ ನಿಂದ ಆಸ್ಪತ್ರೆಯ ಸಿಲಿಂಡರ್ ಗೆ ಆಕ್ಸಿಜನ್ ತುಂಬಲಾಗುತ್ತಿತ್ತು. ಈ ವೇಳೆ ಸೋರಿಕೆಯಾಗಿದೆ.
ಪರಿಣಾಮ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗದೇ 22 ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ 100 ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.