ಚೆನ್ನೈ: ಹದಿಹರೆಯದ ಹುಡುಗಿಯ ಮೇಲೆ ಮೂವರು ಪ್ರತ್ಯೇಕ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾರೆ. 17 ವರ್ಷದ ಬಾಲಕಿ ಮೇಲೆ ಒಂದು ವರ್ಷದ ಅವಧಿಯಲ್ಲಿ ಆರೋಪಿಗಳು ಅತ್ಯಾಚಾರವೆಸಗಿದ್ದು, ಆಕೆ 8 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿಯನ್ನು ಆಕೆಯ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ನಂತರ ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಹುಡುಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ.
ಉದಯನ್, ಶಕ್ತಿ ಮತ್ತು ರಾಮರಾಜ್ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದಾರೆ. ಕಾವೇರಿಪಟ್ಟಣಂ ಬಳಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಹತ್ತನೇ ತರಗತಿಯ ನಂತರ ಆಕೆ ಶಾಲೆಯಿಂದ ಹೊರಗುಳಿದಿದ್ದಾಳೆ. ಕಳೆದ ಒಂದು ವರ್ಷದಿಂದ ಆಕೆ ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ಮತ್ತು ತಾಯಿಯ ಮನೆಯಲ್ಲಿ ವಾಸವಾಗಿದ್ದಳು.
ಚಿಕ್ಕಪ್ಪನ ಮನೆಯ ಬಳಿ ಇದ್ದ ಉದಯನ್ ಅತ್ಯಾಚಾರ ಎಸಗಿದ್ದಾನೆ. ನಂತರದಲ್ಲಿ ಆಕೆಯ ಸಂಬಂಧಿಕರಾಗಿದ್ದ ಶಕ್ತಿ ಮತ್ತು ರಾಮರಾಜ್ ಕೂಡ ಅತ್ಯಾಚಾರ ಎಸಗಿದ್ದಾರೆ. ತಾನು ಮುಟ್ಟಾಗದಿರುವ ಬಗ್ಗೆ ಹುಡುಗಿ ತಾಯಿಯ ಬಳಿ ಹೇಳಿಕೊಂಡಿದ್ದರೂ ಯಾವುದೇ ನೋವು ಇಲ್ಲದ ಕಾರಣ ತಾಯಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಿರಲಿಲ್ಲ.
ಆಕೆ ದಪ್ಪಗಾಗಿ ಹೊಟ್ಟೆ ಕಾಣಿಸಿಕೊಂಡಿದ್ದರಿಂದ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಆಕೆ 8 ತಿಂಗಳ ಗರ್ಭಿಣಿ ಎಂಬುದನ್ನು ತಿಳಿಸಿದ್ದಾರೆ. ನಂತರ ಬಾಲಕಿ ಅತ್ಯಾಚಾರಕ್ಕೊಳಗಾದ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಉದಯನ್ ಮತ್ತು ಶಕ್ತಿಯನ್ನು ಬಂಧಿಸಿದ್ದಾರೆ. ರಾಮರಾಜ್ ತಪ್ಪಿಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಹುಡುಗಿಯನ್ನು ಸರ್ಕಾರಿ ಆಶ್ರಯತಾಣದಲ್ಲಿ ಇರಿಸಲಾಗಿದೆ.