ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ ದೌರ್ಜನ್ಯವೆಸಗಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಅನಾಥಾಶ್ರಮದ ಮಾಲೀಕ, ಹಾಸ್ಟೆಲ್ ವಾರ್ಡನ್ ಆಗಿರುವ ಚೀಲಕುರಿ ವಿಜಯ, ಆತನ ಸಹೋದರ ಸುರಪನೇನಿ ಜಯದೀಪ್ ಹಾಗೂ ಅನಾಥಾಶ್ರಮದ ದಾನಿ ವೇಣುಗೋಪಾಲ ರೆಡ್ಡಿ ಅವರನ್ನು ಬಂಧಿಸಲಾಗಿದೆ.
2015 ರಲ್ಲಿ ಬಾಲಕಿಯನ್ನು ಆಕೆಯ ಚಿಕ್ಕಪ್ಪ ಅನಾಥಾಶ್ರಮಕ್ಕೆ ಕರೆತಂದು ಸೇರಿಸಿದ್ದ. 2019 ರಲ್ಲಿ ಚೀಲಕುರಿ ವಿಜಯ ಬಾಲಕಿಯನ್ನು ಐದನೇ ಮಹಡಿಯಲ್ಲಿನ ಕೋಣೆಗೆ ಕರೆದುಕೊಂಡು ಹೋಗಿದ್ದು, ವೇಣುಗೋಪಾಲ ರೆಡ್ಡಿ ಬಾಲಕಿಗೆ ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದಾನೆ.
ಘಟನೆಯ ನಂತರ ಆಕೆಗೆ ಬೆದರಿಕೆ ಹಾಕಲಾಗಿದೆ. ಇದಾದ ನಂತರ ಆಕೆಯ ಮೇಲೆ ಒಂದು ವರ್ಷದಿಂದ ಅನೇಕ ಸಲ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಮಾತ್ರವಲ್ಲದೆ, ಅನಾಥಾಶ್ರಮದಲ್ಲಿ ಇದ್ದ ಹಲವು ಹುಡುಗಿಯರ ಮೇಲೆ ಕಾಮುಕರು ದೌರ್ಜನ್ಯವೆಸಗಿದ್ದಾರೆ. ಆದರೆ ಹುಡುಗಿಯರು ಭಯದಿಂದ ಹೇಳಿಕೊಳ್ಳುತ್ತಿಲ್ಲ ಎಂದು ಅನಾಥಾಶ್ರಮಕ್ಕೆ ಭೇಟಿ ನೀಡಿದ್ದ ಅಧಿಕಾರಿ ತಿಳಿಸಿದ್ದಾರೆ. ಅಲ್ಲಿದ್ದ ಬಾಲಕಿಯರನ್ನು ಬೇರೆ ಆಶ್ರಯ ತಾಣಗಳಿಗೆ ಕಳುಹಿಸಲಾಗಿದೆ.
ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಲಾಕ್ ಡೌನ್ ಸಂದರ್ಭದಲ್ಲಿ ಚಿಕ್ಕಪ್ಪನ ಮನೆಯಲ್ಲಿದ್ದಳು. ಕೋವಿಡ್ ಟೆಸ್ಟ್ ಮಾಡಿಸದೇ ಅನಾಥಾಶ್ರಮಕ್ಕೆ ಆಗಮಿಸಿದ್ದ ಆಕೆಯನ್ನು ಸೇರಿಸಿಕೊಳ್ಳಲು ವಾರ್ಡನ್ ನಿರಾಕರಿಸಿದ್ದಾನೆ. ಆಕೆ ವಾಪಸ್ ಚಿಕ್ಕಪ್ಪನ ಮನೆಗೆ ಹೋದಾಗ ಚಿಕ್ಕಮ್ಮ ತೀವ್ರವಾಗಿ ಥಳಿಸಿದ್ದಾಳೆ.
ಗಾಯಗೊಂಡ ಬಾಲಕಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಲೈಂಗಿಕ ಕಿರುಕುಳ ಮತ್ತು ದೈಹಿಕ ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಅನಾಥಾಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆನ್ನಲಾಗಿದೆ.