ಹದಿಮೂರು ವರ್ಷದ ಬಾಲಕಿ 12ನೇ ತರಗತಿ ಪರೀಕ್ಷೆಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾಗುವ ಮೂಲಕ ಗಮನ ಸೆಳೆದಿದ್ದಾಳೆ.
ಬಹುಶಃ ಮಧ್ಯಪ್ರದೇಶದ ಶೈಕ್ಷಣಿಕ ಇತಿಹಾಸದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ನೇರವಾಗಿ 12ನೇ ತರಗತಿ ತೇರ್ಗಡೆಯಾದ ಉದಾಹರಣೆ ಇರಲಿಲ್ಲ.
ಇಂದೋರ್ ನ ತನಿಷ್ಕಾ ಸುಜಿತ್ ಈ ಇತಿಹಾಸ ನಿರ್ಮಿಸಿದ್ದು, ಇತ್ತೀಚೆಗೆ ಕೊರೋನಾದಿಂದ ಮೃತಪಟ್ಟ ಸುಜಿತ್ ಅವರ ಪುತ್ರಿ ಈಕೆ.
ತಾಯಿ ಅನುಭಾ ಚಂದ್ರನ್ ಅವರು ಹೇಳುವಂತೆ ಆರಂಭದಿಂದಲೂ ತನಿಷ್ಕಾಗೆ ಮನೆಪಾಠವನ್ನೇ ಮಾಡಲಾಗುತ್ತಿತ್ತು. ಆಕೆಯ ಮೂರನೇ ವಯಸ್ಸಿಗೆ 1 ನೇ ತರಗತಿಗೆ ದಾಖಲಿಸಿಬಿಟ್ಟೆವು.
ವಿದ್ಯಾರ್ಜನೆಯಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡುತ್ತಾ ಸಾಗಿದ ಆಕೆಗೆ 10ನೇ ತರಗತಿ ಮುಗಿಸಿದ ತಕ್ಷಣ 12 ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ಕೋರಲಾಗಿತ್ತು. ಇದಕ್ಕೆ ಸರ್ಕಾರವೂ ಸಮ್ಮತಿಸಿತ್ತು. ಎಲ್ಲರಂತೆ ತನಿಷ್ಕಾ 11, 12 ನೇ ತರಗತಿಗಾಗಿ ಕಾಲೇಜು ಮೆಟ್ಟಿಲು ಹತ್ತಲಿಲ್ಲ. ಖಾಸಗಿಯಾಗಿ ಪರೀಕ್ಷೆ ಕಟ್ಟಿ, ಮನೆಯಲ್ಲೇ ಓದಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಶೇ.62.8 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.
ಮುಂದೆ ಬಿಕಾಂ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ತನಿಷ್ಕಾ, ಕಾಲೇಜಿಗೆ ಹೋಗದೆಯೇ ಮನೆಯಲ್ಲಿಯೇ ಓದಿ ಪರೀಕ್ಷೆ ಬರೆಯಲಿದ್ದಾಳೆ. ನೃತ್ಯಶಾಸ್ತ್ರದಲ್ಲಿ ಪಿಎಚ್ಡಿ ಮಾಡುವ ಆಶಯ ವ್ಯಕ್ತಪಡಿಸಿರುವ ಆಕೆ, ಐಪಿಎಸ್ ಅಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದಾಳೆ.