ಲಖ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ಕಾಮುಕರು ಪೈಶಾಚಿಕ ಕೃತ್ಯವೆಸಗಿದ್ದಾರೆ. 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೃತದೇಹ ಕಂಡು ಬಂದಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನದಿಂದ ಬಾಲಕಿ ನಾಪತ್ತೆಯಾಗಿದ್ದು ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಶನಿವಾರ ಊರ ಹೊರಗಿನ ಕಬ್ಬಿನಗದ್ದೆಯಲ್ಲಿ ನೋಡಲಾಗದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಕಂಡುಬಂದಿದೆ.
ದುಪ್ಪಟ್ಟದಿಂದ ಕತ್ತು ಬಿಗಿದು ಆಕೆಯನ್ನು ಕೊಲೆ ಮಾಡಲಾಗಿದ್ದು, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಹಾಕಲಾಗಿತ್ತು. ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಘಟನೆಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸತ್ಯೇಂದ್ರ ಕುಮಾರ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.