“ಅಮ್ಮ, ನಾನು ಮತ್ತೆ ಶಾಲೆಗೆ ಹೋಗಬೇಕು. ಯಾವಾಗ ಶಾಲೆಗೆ ಹೋಗಬಹುದು..?” ಎಂದು ದೆಹಲಿಯ 12 ವರ್ಷದ ಮಗಳೊಬ್ಬಳು ಮಾಡಿದ ಪ್ರಶ್ನೆಯೊಂದು ದೆಹಲಿ ಹೈಕೋರ್ಟ್ ಮೂಲಕ ಕೇಂದ್ರ ಹಾಗೂ ದೆಹಲಿ ಸರ್ಕಾರಗಳನ್ನು ತಲುಪಿದ್ದು, 12-17 ವರ್ಷದ ಮಕ್ಕಳಿಗೆ ಲಸಿಕೆ ಹಾಕುವುದು ಯಾವಾಗ ಎಂದು ಕೇಳಲಾಗಿದೆ.
ಟಯಾ ಗುಪ್ತಾ ಹೆಸರಿನ 12 ವರ್ಷದ ಬಾಲಕಿ ತನ್ನ ತಾಯಿ ನಿಯೋಮಾ ವಾಸುದೇವ್ ಗುಪ್ತಾ ಮೂಲಕ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರೊಂದಿಗೆ ದೆಹಲಿಯ ಮತ್ತೊಬ್ಬ ನಿವಾಸಿ ರೋಮಾ ರಹೇಜಾ ಎಂಬ 8 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ಸಹ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿರುವ ಮಕ್ಕಳು ಹಾಗೂ ಅವರ ಪೋಷಕರಿಗೆ ಲಸಿಕೆ ಹಾಕಲು ಸೂಕ್ತವಾದ ಮಾರ್ಗಸೂಚಿಯನ್ನು ತರಲು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ.
“ಕೆಲ ತಿಂಗಳ ಹಿಂದೆ ಭೋಜನ ಮಾಡುತ್ತಿದ್ದ ಸಂದರ್ಭದಲ್ಲಿ, ನನ್ನ ಮಗಳು ಮತ್ತೆ ಶಾಲೆಗೆ ಹೋಗುವುದು ಯಾವಾಗ ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ನಾನು, ನಿನಗೆ ಲಸಿಕೆ ಹಾಕಿದ ಕೂಡಲೇ” ಎಂದ ನಿಯೋಮಾ, “ಈ ಸಂವಹನ ಒಂದೂವರೆ ತಿಂಗಳ ಹಿಂದೆ ನಡೆದಿದ್ದು, ಎರಡನೇ ಅಲೆಯಿಂದಾಗಿ ನಮ್ಮ ಮನೆಗೆ ದೊಡ್ಡ ಹೊಡೆತವನ್ನೇ ಕೊಟ್ಟು, ವೈರಾಣು ನಮ್ಮನ್ನು ನಾಶ ಮಾಡಲು ಬಂದಿದೆ ಎನಿಸುತ್ತದೆ. ಅವಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ” ಎಂದು ಹೇಳಿದ್ದಾರೆ.
ನ್ಯಾಯಾಧೀಶರಾದ ಡಿ.ಎನ್. ಪಟೇಲ್ ಹಾಗೂ ಜ್ಯೋತಿ ಸಿಂಗ್ ಇದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ಬಂದಿದ್ದು, ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ಕೋರ್ಟ್ ನೋಟಿಸ್ ಕೊಟ್ಟಿದ್ದು, ಜೂನ್ 4ಕ್ಕೆ ಆಲಿಕೆ ನಿಗದಿಪಡಿಸಿದೆ.