ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದು 28 ವರ್ಷಗಳ ಬಳಿಕ ಪ್ರಕರಣ ದಾಖಲಾಗಿದೆ.
ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಗೆ ಆಗ 12 ವರ್ಷ ವಯಸ್ಸಾಗಿತ್ತು. ಯುಪಿ ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ಡಿಎನ್‌ಎ ಪರೀಕ್ಷಾ ವರದಿಯಲ್ಲಿ ಆರೋಪಿಯನ್ನು ಗುರುತಿಸಿದ್ದು, ಆತನನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ.
ಈ ಸಿನಿಮೀಯ ಘಟನೆ ನಡೆದಿದ್ದು 1994ರಲ್ಲಿ. 12 ವರ್ಷದ ಸಂತ್ರಸ್ತೆ ತನ್ನ ಸೋದರ ಮಾವನ ಮನೆಯಲ್ಲಿದ್ಲು. ಅವರಿಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು. ಒಂದು ದಿನ ನೆರೆಮನೆಯ ಲಕ್ಕಿ ಹಸನ್ ಮತ್ತು ಗುಡ್ಡು ಎಂಬುವವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಪರಿಣಾಮ ಬಾಲಕಿ ಗರ್ಭಿಣಿಯಾದ್ಲು.
ಆರೋಪಿಗಳು ಮತ್ತೇನಾದ್ರೂ ಮಾಡಬಹುದು ಅನ್ನೋ ಭಯ, ಸಮಾಜದಲ್ಲಾಗುವ ಅವಮಾನಕ್ಕೆ ಹೆದರಿ ಆಕೆ ಲಖ್ನೋಕ್ಕೆ ಶಿಫ್ಟ್ ಆದ್ಲು. ನಂತರ ಆಕೆಗೊಬ್ಬ ಮಗ ಜನಿಸಿದ. ಅವನನ್ನು ದೂರದ ಪರಿಚಯಸ್ಥರಿಗೆ ಸಾಕಲು ಕೊಟ್ಟಿದ್ಲು. ನಂತರ ಗಾಜಿಪುರದ ವ್ಯಕ್ತಿಯ ಜೊತೆ ಅವಳ ಮದುವೆಯೂ ಆಗಿತ್ತು. ಮತ್ತೊಂದೆಡೆ 26 ವರ್ಷದವನಿದ್ದಾಗ ಆಕೆಯ ಪುತ್ರ ತನ್ನ ನಿಜವಾದ ಹೆತ್ತವರನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ. ಕೊನೆಗೂ ಲಖ್ನೋದಲ್ಲಿದ್ದ ತಾಯಿ ಆತನಿಗೆ ಸಿಕ್ಕಿದಾಗ ತನ್ನ ತಂದೆಯ ಬಗ್ಗೆ ವಿಚಾರಿಸಿದ. ತನ್ನ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ವಿಚಾರ ತಿಳಿದು ಆಘಾತಕ್ಕೊಳಗಾದ.
ತಾಯಿಗೆ ನ್ಯಾಯ ಕೊಡಿಸಲೇಬೇಕೆಂದು ನಿರ್ಧರಿಸಿದ ಯುವಕ, ವರ್ಷದ ಹಿಂದೆಯೇ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಲಕ್ಕಿ ಹಸನ್ ಮತ್ತು ಗುಡ್ಡು ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದ. ಮುಂದಿನ ಕ್ರಮ ಕೈಗೊಂಡ ಪೊಲೀಸರು ಆರೋಪಿಗಳ ಡಿಎನ್‌ಎ ಮತ್ತು ಸಾಮೂಹಿಕ ಅತ್ಯಾಚಾರದಿಂದ ಜನಿಸಿದ ಮಗನ ಡಿಎನ್‌ಎ ಹೊಂದಾಣಿಕೆಯನ್ನು ಪಡೆದರು. ನೈಜ ಘಟನೆ ಬೆಳಕಿಗೆ ಬಂದ ನಂತರ ಸಂತ್ರಸ್ತೆಯ ಪತಿಯೂ ಆಕೆಗೆ ವಿಚ್ಛೇದನ ನೀಡಿದ್ದಾನೆ.
ದೂರು ದಾಖಲಿಸಿದ ಮಗ ಮತ್ತು ಸಂತ್ರಸ್ತೆ ತಾಯಿ ಪ್ರಸ್ತುತ ಲಕ್ನೋದಲ್ಲಿ ವಾಸಿಸುತ್ತಿದ್ದಾರೆ. ಮತ್ತೊಂದೆಡೆ ಡಿಎನ್‌ಎ ಹೊಂದಾಣಿಕೆ ಬಳಿಕ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.