![](https://kannadadunia.com/wp-content/uploads/2020/07/corona-bharath-vaccine-july-13.jpg)
ನವದೆಹಲಿ: ಜುಲೈ 13 ರಿಂದ ಕೊರೋನಾ ಲಸಿಕೆಯ ಪ್ರಯೋಗ ಆರಂಭವಾಗಲಿದೆ. ಭಾರತ್ ಬಯೋಟೆಕ್ ಸಂಸ್ಥೆಯಿಂದ ಕೊರೋನಾ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭ ಮಾಡಲಾಗುವುದು.
ಸುಮಾರು 1100ಕ್ಕೂ ಹೆಚ್ಚು ಜನರ ಮೇಲೆ ಲಸಿಕೆಯ ಪ್ರಯೋಗ ಮಾಡಲು ಅನುಮೋದನೆ ಪಡೆದುಕೊಂಡಿರುವ ಭಾರತ್ ಬಯೋಟೆಕ್ ಸಂಸ್ಥೆ ಜುಲೈ 13 ರಿಂದ ಪ್ರಯೋಗ ಆರಂಭಿಸಲಿದೆ. ಅಂದ ಹಾಗೇ ಲಸಿಕೆ ಪ್ರಯೋಗ ಫಲಿತಾಂಶಕ್ಕೆ ಒಂದು ವರ್ಷ 3 ತಿಂಗಳು ಬೇಕಾಗುತ್ತದೆ.
ಫಲಿತಾಂಶಕ್ಕಾಗಿ ಒಟ್ಟು 15 ತಿಂಗಳು ಬೇಕಾಗಲಿದ್ದು, ಈ ಅವಧಿಯಲ್ಲಿ 2-ಹಂತದ ಪ್ರಯೋಗವನ್ನು ಭಾರತ್ ಬಯೋಟೆಕ್ ಸಂಸ್ಥೆ ನಡೆಸಲಿದೆ.
ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಈ ಪ್ರಯೋಗಗಳನ್ನು ನಡೆಸಲು ದೆಹಲಿ ಏಮ್ಸ್ ಮತ್ತು ಪಾಟ್ನಾ ಸೇರಿದಂತೆ 12 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಆಗಸ್ಟ್ 15 ರೊಳಗೆ ಕೊರೊನಾವೈರಸ್ ಲಸಿಕೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು, ತಜ್ಞರ ಟೀಕೆಗೆ ಒಳಗಾಗಿದೆ. ಔಷಧ ಪ್ರಯೋಗಗಳು ಆರೋಗ್ಯಕ್ಕೆ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿದ್ದು, ಮಾನವ ಪ್ರಯೋಗ ಪರೀಕ್ಷೆಯ ನಂತರವೇ ಲಸಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.