ದೇವಸ್ಥಾನ ನಿರ್ಮಾಣಕ್ಕೆ ತೋಡಲಾದ ಅಡಿಪಾಯಕ್ಕೆ ಗ್ರಾಮಸ್ಥರು ಹಾಲು, ಮೊಸರು ಹಾಗೂ ದೇಸಿ ತುಪ್ಪದ ಬರೋಬ್ಬರಿ 11 ಸಾವಿರ ಲೀಟರ್ ಮಿಶ್ರಣವನ್ನ ಸುರಿದ ವಿಶಿಷ್ಟ ಆಚರಣೆ ರಾಜಸ್ಥಾನದ ಜಲ್ವಾರ್ ಜಿಲ್ಲೆಯ ರತ್ಲೈ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ದೇವ ನಾರಾಯಣ ದೇವಾಲಯವನ್ನ ನಿರ್ಮಿಸಲಾಗುತ್ತಿದೆ.
ದೇವ ಭಗವಾನ್ ದೇವನಾರಾಯಣರಿಗೆ ಗೌರವದ ಸಂಕೇತವಾಗಿ ದೇವ್ ನಾರಾಯಣ್ ದೇಗುಲವನ್ನ ನಿರ್ಮಿಸುತ್ತಿದ್ದೇವೆ. ಅಡಿಪಾಯ ಸಮಾರಂಭಕ್ಕಾಗಿ ಗುಜ್ಜರ್ ಸಮುದಾಯ ಹಾಗೂ ಇತರರು ಸೇರಿ 11 ಸಾವಿರ ಲೀಟರ್ನಷ್ಟು ಹಾಲು, ಮೊಸರು ಹಾಗೂ ದೇಸಿ ತುಪ್ಪವನ್ನ ಸಂಗ್ರಹಿಸಿದ್ದೆವು ಎಂದು ದೇಗುಲ ನಿರ್ಮಾಣ ಸಮಿತಿ ವಕ್ತಾರ ರಾಮ್ಲಾಲ್ ಗುಜ್ಜರ್ ಹೇಳಿದ್ರು.
11 ಸಾವಿರ ಲೀಟರ್ನಲ್ಲಿ 1500 ಲೀಟರ್ ಮೊಸರು, 1 ಕ್ವಿಂಟಲ್ ದೇಸಿ ತುಪ್ಪ ಹಾಗೂ ಉಳಿದವು ಹಾಲಾಗಿದೆ. ಇದಕ್ಕೆ ಸುಮಾರು 1.50 ಲಕ್ಷ ರೂಪಾಯಿ ಅಂದಾಜು ವೆಚ್ಚವಾಗಿದೆ. ಇಂತಹ ಸಮಾರಂಭಗಳಿಗೆ ಹಾಲು ಹಾಕುವ ಸಂಪ್ರದಾಯ ಕಡ್ಡಾಯವೇ ಎಂದು ಕೇಳಿದಾಗ ಇದು ಕಡ್ಡಾಯವಲ್ಲ. ಆದರೆ ಈ ಹಿಂದೆ ಹಲವು ಬಾರಿ ಈ ರೀತಿ ಮಾಡಿದ್ದೇವೆ ಎಂದು ರಾಮ್ಲಾಲ್ ಹೇಳಿದ್ರು.
ದೇವನಾರಾಯಣ್ ದೇವರಿಗೆ ಹಾಲು ಸುರಿಯೋದ್ರಿಂದ ಜಾನುವಾರುಗಳನ್ನ ದೇವರು ಕಾಪಾಡುತ್ತಾನೆ ಎಂಬುದು ನಂಬಿಕೆಯಾಗಿದೆ. 1 ಕೋಟಿ ರೂಪಾಯಿ ಮೊತ್ತದಲ್ಲಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು 2 ವರ್ಷದಲ್ಲಿ ದೇಗುಲ ಲೋಕಾರ್ಪಣೆಯಾಗಲಿದೆ.