ನವದೆಹಲಿ: ತಾಯಿಯಿಂದ ಬೈಸಿಕೊಂಡು ಮನೆ ಬಿಟ್ಟು ಹೋದ 11 ವರ್ಷದ ಬಾಲಕ ದೆಹಲಿ ಪೊಲೀಸರನ್ನು ಒಂದಿಡೀ ರಾತ್ರಿ ತುದಿಗಾಲಲ್ಲಿ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ. ಆತ ತನ್ನ ಸೈಕಲ್ ನಲ್ಲಿ ಹೊರಟು ಹರಿದ್ವಾರದ ದಾರಿ ಹುಡುಕುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
ಬಾಲಕನ ಪಾಲಕರು ಶುಕ್ರವಾರ ರಾತ್ರಿ ತಮ್ಮ ಮಗ ನಾಪತ್ತೆಯಾದ ಬಗ್ಗೆ ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಿಡ್ನಾಪಿಂಗ್ ಪ್ರಕರಣ ದಾಖಲಾಗಿತ್ತು. ಬಾಲಕ ತನ್ನ ತಾಯಿಯ ಪರ್ಸ್ ನಿಂದ 5 ಸಾವಿರ ರೂ. ತೆಗೆದುಕೊಂಡು ಹೋಗಿದ್ದ. ಪಹಾರ್ ಗಂಜ್ ರೈಲ್ವೆ ಠಾಣೆಯಲ್ಲಿ ಗೋವಾ ರೈಲಿನ ಬಗ್ಗೆ ವಿಚಾರ ಮಾಡಿದ್ದ ಎನ್ನಲಾಗಿದೆ.
ರೋಹಿಣಿ ಠಾಣೆ ಡಿಸಿಪಿ ಪಿ.ಕೆ.ಮಿಶ್ರಾ ಅವರು ದಕ್ಷಿಣ ರೋಹಿಣಿ ಠಾಣಾಧಿಕಾರಿ ಇನ್ಸ್ ಪೆಕ್ಟರ್ ಸಂಜಯ ಕುಮಾರ್ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಪೊಲೀಸರು, ರೈಲ್ವೆ ನಿಲ್ದಾಣ, ಮೆಟ್ರೊ, ಪಾರ್ಕ್, ಬಸ್ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿ ಹೀಗೆ ಎಲ್ಲೆಂದರಲ್ಲಿ ರಾತ್ರಿಯಿಡೀ ಹುಡುಕಿದರು. ನಂತರ ಬಾಲಕ ಬೆಳಗಿನಜಾವ 4.20 ರ ಸುಮಾರಿಗೆ ಸಿಂಘು ಗಡಿಯಲ್ಲಿ ಪತ್ತೆಯಾಗಿದ್ದಾನೆ.
ತನ್ನ ಸೈಕಲ್ ತೆಗೆದುಕೊಂಡು ಹೊರಟ ಬಾಲಕ ಚಾಯ್ ವಾಲಾ ಒಬ್ಬನ ಬಳಿ ಹರಿದ್ವಾರಕ್ಕೆ ಹೋಗುವ ದಾರಿ ಕೇಳಿದ್ದ ಎನ್ನಲಾಗಿದೆ. “ಬಾಲಕ ಮೊಬೈಲ್ ತೆಗೆದುಕೊಂಡು ಹೋಗದೇ ಇರುವುದು ಭಯ ಹುಟ್ಟಿಸಿತ್ತು. ಶೋಧ ಕಾರ್ಯಾಚರಣೆ ವಿಳಂಬವಾಯಿತು” ಎಂದು ಪೊಲೀಸ್ ಅಧಿಕಾರಿ ಶರ್ಮಾ ಹೇಳಿದ್ದಾರೆ.