
ಜಿಂದ್: ಜಿಂದ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ 20 ಲಕ್ಷ ರೂಪಾಯಿ ದೋಚಲಾಗಿದೆ. 11 ವರ್ಷದ ಬಾಲಕನೊಬ್ಬ ಕ್ಯಾಶ್ ಕೌಂಟರ್ ನಿಂದ ಹಣ ಎಗರಿಸಿದ್ದು ಬಳಿಕ ವ್ಯಕ್ತಿಯೊಂದಿಗೆ ಬ್ಯಾಂಕ್ ನಿಂದ ಪರಾರಿಯಾಗಿದ್ದಾನೆ.
ಆರೋಪಿಗಳನ್ನು ಗುರುತಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಜಿಂದ್ ನ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎದುರುಗಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಗೆ ಬಾಲಕ ಪ್ರವೇಶಿಸಿದ್ದಾನೆ.
ಹೆಚ್ಚು ಜನರು ಇದ್ದ ವೇಳೆಯಲ್ಲಿ ಕ್ಯಾಶ್ ಕೌಂಟರ್ ಬಾಗಿಲು ಹಾಕದೇ ಕ್ಯಾಷಿಯರ್ ಹೊರಗೆ ಹೋಗಿದ್ದ ವೇಳೆ ಒಳಪ್ರವೇಶಿಸಿದ ಬಾಲಕ ತಲಾ 5 ಲಕ್ಷ ರೂಪಾಯಿಗಳ 4 ಕಟ್ಟುಗಳನ್ನು ಜೇಬಿಗೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬಳಿಕ ಬ್ಯಾಗ್ ನಲ್ಲಿ ಹಣ ಹಾಕಿಕೊಂಡು ತನ್ನೊಂದಿಗೆ ಬಂದಿದ್ದ ವ್ಯಕ್ತಿಯೊಂದಿಗೆ ಬಾಲಕ ಬ್ಯಾಂಕ್ ನಿಂದ ಹೋಗಿದ್ದಾನೆ. ದೃಶ್ಯಗಳೆಲ್ಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ದಿನದ ವಹಿವಾಟು ಮುಗಿದ ನಂತರ ಕ್ಯಾಷಿಯರ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಣ ಕಡಿಮೆ ಇರುವುದು ಗೊತ್ತಾಗಿದೆ. ಸಿಸಿಟಿವಿ ಗಮನಿಸಿದಾಗ ಬಾಲಕ 20 ಲಕ್ಷ ರೂಪಾಯಿಗೂ ಅಧಿಕ ಹಣ ಕದ್ದೊಯ್ದಿರುವುದು ಕಂಡುಬಂದಿದೆ.
