ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಆವರಣವನ್ನು ಅಭಿವೃದ್ಧಿಪಡಿಸಲು ಹೊರಟ ಮಂದಿಗೆ ಸಾವಿರ ವರ್ಷಗಳ ಕಟ್ಟಡವೊಂದರ ಕುರುಹು ಕಾಣಿಸಿಕೊಂಡಿದೆ.
ಶುಕ್ರವಾರದಂದು ದೇಗುಲದ ಅಭಿವೃದ್ಧಿ ಕಾರ್ಯಕ್ಕೆಂದು ಸುತ್ತಲಿನ ಪ್ರದೇಶವನ್ನು ಅಗೆಯುತ್ತಿದ್ದ ವೇಳೆ ಈ ಕಟ್ಟಡದ ಅವಶೇಷ ಸಿಕ್ಕಿದ್ದು, ಕೂಡಲೇ ಅಗೆಯುವ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. 20 ಅಡಿ ಆಳದಲ್ಲಿ ಸಿಕ್ಕ ಈ ಕಟ್ಟಡದಲ್ಲಿ ಮೆಟ್ಟಿಲುಗಳೂ ಸಹ ಕಂಡು ಬಂದಿವೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.
ಈ ಕಟ್ಟಡ ಏನಿಲ್ಲವೆಂದರೂ 1000 ವರ್ಷಗಳಷ್ಟು ಹಳೆಯದಾಗಿದೆ ಎಂದು ಪ್ರಾಚ್ಯವಸ್ತು ತಜ್ಞ ಡಾ. ರಾಮನ್ ಸೋಲಂಕಿ ತಿಳಿಸಿದ್ದಾರೆ. ಅವರ ಅನುಮತಿ ಸಿಗುವವರೆಗೂ ಅಗೆಯುವ ಕಾರ್ಯ ಮುಂದುವರೆಯುವುದಿಲ್ಲವೆಂದು ದೇಗುಲದ ಆಡಳಿತ ತಿಳಿಸಿದೆ. 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯ ಮಹಾಕಾಳೇಶ್ವರನ ಲಿಂಗವೂ ಒಂದಾಗಿದೆ.