ಕೊರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ ಪಡೆಯಲು 100 ವರ್ಷದ ವೃದ್ಧೆಯ ಮನೆ ಬಾಗಿಲಿಗೇ ಬ್ಯಾಂಕ್ ಸೇವೆ ತಲುಪಿದೆ.
ಉತ್ತರಪ್ರದೇಶ ಸರ್ಕಾರವು ಸಂಕಷ್ಟಕ್ಕೆ ಸಿಲುಕಿದವರಿಗೆ 1,500 ಪರಿಹಾರ ಧನ ಘೋಷಿಸಿತ್ತು. ಇದನ್ನು ನಗದೀಕರಣ ಮಾಡಿಕೊಳ್ಳಲು 60 ವರ್ಷ ಪಂಜುಮತಿ ದೇಯಿ ಅವರು ಬಾರಗಾಂವ್ ಉತ್ಕಲ್ ಗ್ರಾಮೀಣ ಬ್ಯಾಂಕ್ ಗೆ ತೆರಳಿದರು. ಅವರಿಗೆ ಹಣ ಸಿಕ್ಕಿತು. ಆದರೆ, 100 ವರ್ಷದ ತಾಯಿಯ ಹಣ ವಿಥ್ ಡ್ರಾ ಮಾಡಲು ಬ್ಯಾಂಕ್ ಒಪ್ಪಲಿಲ್ಲ. ಹೆಬ್ಬೆರಳು ಗುರುತು ಕೊಡಲು 100 ವರ್ಷದ ನಿಮ್ಮ ತಾಯಿಯೇ ಖುದ್ದು ಬರಬೇಕೆಂದು ಹೇಳಿ ಕಳುಹಿಸಿತ್ತು. ದಿಕ್ಕು ತೋಚದ ಪಂಜುಮತಿ ದೇಯಿ, ತಾಯಿ ಮಲಗಿದ್ದ ಹಾಗೆಯೇ ಮಂಚವನ್ನೇ ಬ್ಯಾಂಕ್ ಬಾಗಿಲಿಗೆ ಎಳೆದು ತಂದರು.
ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಷಯದ ಗಂಭೀರತೆ ಅರಿತ ಸರ್ಕಾರ, ಬ್ಯಾಂಕ್ ವ್ಯವಸ್ಥಾಕ ನಿರ್ದೇಶಕ ಅಜಿತ್ ಕುಮಾರ್ ಪ್ರಧಾನ್ ಅವರನ್ನು ಅಮಾನತುಪಡಿಸಿತು. ಅಷ್ಟೇ ಅಲ್ಲದೆ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರೇ ಖುದ್ದು ವಿಚಾರಣೆ ಮಾಡಿ, ವೃದ್ಧೆಯ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ತಲುಪಿಸಲು ಸೂಚಿಸಿದರು. ಬಳಿಕ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ತೆರೆದು, ಆಧಾರ್ ಆಧಾರಿತ ಬಟವಾಡೆ ಪದ್ಧತಿ ಮೂಲಕ ಹಣ ನಗದೀಕರಣ ಮಾಡಿಕೊಳ್ಳಲು ಅನುಮತಿಸಿದರು.