ಲಖ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಇಂದು ತಮ್ಮ ಹೇಳಿಕೆ ದಾಖಲಿಸಿದ್ದಾರೆ. 4 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಅವರು 100 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆನ್ನಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.30 ರ ವರೆಗೆ ಸಿಬಿಐ ವಿಶೇಷ ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಹೇಳಿಕೆ ನೀಡಿದ ಅಡ್ವಾಣಿ 100 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಅಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
1992 ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿತರ ಹೇಳಿಕೆ ದಾಖಲು ಮಾಡಿಕೊಂಡಿದ್ದು ಆಗಸ್ಟ್ 31ರಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಜನರ ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 48 ಎಫ್ಐಆರ್ ದಾಖಲಾಗಿದ್ದು 49 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಇವರಲ್ಲಿ 17 ಮಂದಿ ಮೃತಪಟ್ಟಿದ್ದಾರೆ.