ಪಿಎಂ-ಕೇರ‍್ಸ್ ನಿಧಿಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತಿರುವ ನಾಗರಿಕ ಸೇವೆಯ 100 ಮಂದಿ ಮಾಜಿ ಅಧಿಕಾರಿಗಳು, ಈ ಖಾತೆಯ ಮುಖಾಂತರ ನಡೆಯುವ ವ್ಯವಹಾರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಕೋರಿದ್ದಾರೆ.
ಸಾರ್ವಜನಿಕ ಹೊಣೆಗಾರಿಕೆ, ಅಗತ್ಯ ಬಿದ್ದಲ್ಲಿ ತನಿಖೆ ನಡೆಸಲು ಹಾಗೂ ಯಾವುದೇ ಅವ್ಯವಹಾರದ ಅನುಮಾನಗಳನ್ನು ಹೋಗಲಾಡಿಸಲು ಖಾತೆಯ ಆರ್ಥಿಕ ವಿವರಗಳು ಹಾಗೂ ಖರ್ಚು-ವೆಚ್ಚಗಳ ಮಾಹಿತಿಗಳನ್ನು ಲಭ್ಯವಿರುವಂತೆ ಮಾಡಲು ಕೋರಲಾಗಿದೆ.
“ಕೋವಿಡ್ ಸಾಂಕ್ರಮಿಕದಿಂದ ಸಂಕಟದಲ್ಲಿರುವ ಜನರಿಗೆಂದು ಸೃಷ್ಟಿಸಲಾದ ಈ ನಿಧಿಯ ನಿರ್ವಹಣೆಯ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿದ್ದು, ಇವುಗಳಿಗೆ ಉತ್ತರ ಸಿಗುತ್ತಿಲ್ಲ. ಪ್ರಧಾನ ಮಂತ್ರಿಯ ಹುದ್ದೆ ಹಾಗೂ ಘನತೆಯಲ್ಲಿರುವವರು ತಾವು ಭಾಗಿಯಾದ ವ್ಯವಹಾರದ ಕುರಿತಂತೆ ಪಾರದರ್ಶಕತೆ ಕಾಪಾಡುವುದು ಅತ್ಯಗತ್ಯ” ಎಂದು ಪತ್ರವೊಂದರ ಮೂಲಕ ಈ ಅಧಿಕಾರಿಗಳು ಆಗ್ರಹಿಸಿದ್ದಾರೆ.
ಪತ್ರಕ್ಕೆ ಮಾಜಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಸಹಿ ಹಾಕಲಾಗಿದೆ. ಕೋವಿಡ್-19ನಂಥ ತುರ್ತು ಪರಿಸ್ಥಿತಿಗಳಲ್ಲಿ ಸಂಕಟದಲ್ಲಿರುವ ಸಾರ್ವಜನಿಕರ ನೆರವಿಗೆ ಬರಲೆಂದು ಪಿಎಂ-ಕೇರ‍್ಸ್ ನಿಧಿಗೆ ಕಳೆದ ವರ್ಷದ ಮಾರ್ಚ್‌ನಲ್ಲಿ ಚಾಲನೆ ಕೊಡಲಾಗಿದೆ.