ದೇಶದ ಅತಿ ದೊಡ್ಡ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಕೋವಿಡ್-19 ವಿರುದ್ಧ ಹೋರಾಟ ಮಾಡುತ್ತಿರುವ ಮುಂಚೂಣಿ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ ಮೋದಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸ್ವಚ್ಛತಾ ಕಾರ್ಯಕರ್ತರಾದ ಮನೀಷ್ ಕುಮಾರ್ ಕೋವಿಡ್-19 ಲಸಿಕೆ ಹಾಕಿಸಿಕೊಂಡ ದೇಶದ ಮೊದಲ ವ್ಯಕ್ತಿಯಾಗಿದ್ದಾರೆ.
ಮೊದಲ ದಿನ ಮೂರು ಲಕ್ಷ ಮಂದಿಗೆ ಲಸಿಕೆ ಹಾಕಲು ಸರ್ಕಾರ ಗುರಿ ಇಟ್ಟುಕೊಂಡಿತ್ತಾದರೂ, ದಿನದ ಕೊನೆಗೆ 1.91 ಲಕ್ಷ ಮಂದಿಗೆ ಚುಚ್ಚುಮದ್ದು ಕೊಡಲಾಗಿದೆ.
ಕೋವ್ಯಾಕ್ಸಿನ್‌ನ ವೈದ್ಯಕೀಯ ಪ್ರಯೋಗದ ಬಗ್ಗೆ ಅಸ್ಪಷ್ಟತೆ ಹಾಗೂ ಲಸಿಕೆಗಳ ಕುರಿತಂತೆ ಇರುವ ಇನ್ನಷ್ಟು ಅನುಮಾನಗಳ ಕಾರಣದಿಂದಾಗಿ ಬಹುತೇಕ ಮಂದಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ ಕಾರಣ ಗುರಿಯನ್ನು ಮುಟ್ಟಲಾಗಲಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಲಸಿಕೆ ಹಾಕಿಸಿಕೊಂಡ ಬಳಿಕವೂ ಸಹ ಜನ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚಿಸಿರುವ ಪ್ರಧಾನಿ, ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಅತ್ಯಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಬೇಕೆಂದು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.