ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ನಿರ್ಧಾರ ಕಗೊಳ್ಳಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಮೂಲಕ ದೇಶದಲ್ಲಿ ಹೆಣ್ಣು ಮಕ್ಕಳು ಯಾವಾಗ ಮದುವೆಯಾಗಬೇಕು ಎಂಬ ಬಗ್ಗೆ ಇನ್ಮುಂದೆ ಸರ್ಕಾರವೇ ನಿರ್ಧರಿಸಲಿದೆ.
ಪ್ರಸ್ತುತ, ಹೆಣ್ಣು ಮಕ್ಕಳ ಮದುವೆಗೆ ಕನಿಷ್ಠ 18 ವರ್ಷವಾಗಿರಬೇಕು. ಗಂಡು ಮಕ್ಕಳಿಗೆ ಕನಿಷ್ಠ 21 ವರ್ಷವಾಗಿರಬೇಕು ಎಂಬ ನಿಯಮವಿದೆ. ಈ ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.
ಹೆಣ್ಣು ಮಕ್ಕಳ ಮದುವೆ ಕುರಿತು ಕನಿಷ್ಠ ವಯಸ್ಸಿನ ಮಿತಿ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ಶಿಫಾರಸಿನ ಮೇಲೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ನೋಂದಣಿ ಗಂಡು ಮಕ್ಕಳಿಗಿಂತ ಹೆಚ್ಚಿದೆ. ಹಲವು ಹೆಣ್ಣು ಮಕ್ಕಳು ಮದುವೆಯ ವಯಸ್ಸಿನ ಕನಿಷ್ಠ ಮಿತಿಯನ್ನು ಹೆಚ್ಚಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.