ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬಹಳ ದಣಿದಿದ್ದ ಹಿರಿಯ ಮಹಿಳಾ ಭಕ್ತೆಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋದ ಘಟನೆ ಸುದ್ದಿ ಮಾಡುತ್ತಿದೆ.
ಶೇಖ್ ಅರ್ಶದ್ ಹೆಸರಿನ ಈ ಪೇದೆ 58 ವರ್ಷದ ಮಂಗಿ ನಾಗೇಶ್ವರಮ್ಮ ಎಂಬ ಭಕ್ತೆಯೊಬ್ಬರನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಬೆಟ್ಟ ಹತ್ತಿಸಿದ್ದಾರೆ. ತೀವ್ರವಾಗಿ ದಣಿದಿದ್ದ ನಾಗೇಶ್ವರಮ್ಮರನ್ನು ಆರು ಕಿಮೀ ದೂರ ಹೊತ್ತು ನಡೆದ ಅರ್ಶದ್, ಆಕೆಗೆ ಔಷಧೋಪಚಾರ ಸಿಗುವೆಡೆಗೆ ತಲುಪಿಸಿದ್ದಾರೆ.
ಕಡಪ ಜಿಲ್ಲೆಯ ವಿಶೇಷ ಪೊಲೀಸ್ ಪಡೆಯ ಭಾಗವಾಗಿ ತಿರುಮಲೆಯಲ್ಲಿ ಬರುವ ಭಕ್ತರ ರಕ್ಷಣೆಯ ಕರ್ತವ್ಯದಲ್ಲಿದ್ದ ಅರ್ಶದ್‌ಗೆ ರಕ್ತದೊತ್ತಡ ಹೆಚ್ಚಾಗಿ ಕುಸಿಯಲಿದ್ದ ನಾಗೇಶ್ವರಮ್ಮ ಕಂಡಿದ್ದು, ದಟ್ಟ ಅಡವಿ ನಡುವೆಯೇ ಅವರನ್ನು ಸುರಕ್ಷತೆಯತ್ತ ಹೊತ್ತೊಯ್ದಿದ್ದಾರೆ. ಪೇದೆಯ ಈ ಹೃದಯಸ್ಪರ್ಶಿ ನಡೆಯ ಬಗ್ಗೆ ಆಂಧ್ರ ಪ್ರದೇಶ ಪೊಲೀಸ್ ಮುಖ್ಯಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.