ದೇಶಕ್ಕೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ 4 ತಿಂಗಳಿಗೂ ಅಧಿಕ ಕಾಲದಿಂದ ಕೊರೊನಾ ಕಾಡತೊಡಗಿದ್ದು, ಇದು ಯಾವಾಗ ಅಂತ್ಯಗೊಳ್ಳಲಿದೆಯೋ ಎಂಬ ನಿರೀಕ್ಷೆಯಲ್ಲಿ ನಿತ್ಯ ಕಾಲ ಕಳೆಯಬೇಕಾಗಿದೆ.
ಕೊರೊನಾ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಕೋರ್ಟ್ ಕಲಾಪಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಸಮನ್ಸ್ ಮತ್ತು ನೋಟಿಸ್ ಜಾರಿಗೊಳಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ.
ಕೊರೊನಾ ಕಾಲದಲ್ಲಿ ವ್ಯಕ್ತಿಗಳಿಗೆ ಸಮನ್ಸ್ ಅಥವಾ ನೋಟಿಸ್ ತಲುಪಿಸುವುದು ಕಷ್ಟಕರವಾಗಿರುವ ಕಾರಣ, ವಾಟ್ಸಾಪ್, ಇ-ಮೇಲ್, ಫ್ಯಾಕ್ಸ್ ಮೂಲಕವೂ ಇದನ್ನು ಕಳುಹಿಸಬಹುದಾಗಿದೆ ಎಂದು ತಿಳಿಸಿದೆ.
ವಾಟ್ಸಾಪ್ ಮೂಲಕ ಕಳುಹಿಸಿದ ವೇಳೆ ಅದರಲ್ಲಿ ಮೂಡುವ ಎರಡು ನೀಲಿ ರೈಟ್ ಮಾರ್ಕ್ ಸಮನ್ಸ್ ಅಥವಾ ನೋಟಿಸ್ ತಲುಪಿರುವುದಕ್ಕೆ ಪುರಾವೆ ಎಂದು ಪರಿಗಣಿಸಲಾಗುತ್ತದೆ. ಸುಪ್ರೀಂ ಕೋರ್ಟಿನ ಈ ತೀರ್ಮಾನದಿಂದಾಗಿ ನೋಟಿಸ್ ತಲುಪಿಲ್ಲ ಎಂಬ ಕಾರಣಕ್ಕಾಗಿ ಪ್ರಕರಣಗಳು ವಿಳಂಬವಾಗುವುದು ತಪ್ಪಿದಂತಾಗುತ್ತದೆ.