ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ ಈ ಬಾರಿ ಶಾಲಾ – ಕಾಲೇಜುಗಳು ನಡೆದಿರುವುದು ಕೇವಲ ಬೆರಳೆಣಿಕೆಯ ದಿನಗಳಷ್ಟು ಮಾತ್ರ. ಈಗ ಆನ್ಲೈನ್ ಶಿಕ್ಷಣ ನಡೆಯುತ್ತಿದ್ದು, ಮನೆಯಿಂದಲೇ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಹೀಗಿದ್ದರೂ ಸಹ ರಾಜ್ಯದ ಕೆಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿ, ಸಾರಿಗೆ, ಗ್ರಂಥಾಲಯ ಎಂಬೆಲ್ಲಾ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗದಿದ್ದರೂ ಸಹ ಈ ಶುಲ್ಕ ಪಾವತಿಸಲು ಒತ್ತಾಯಿಸಲಾಗುತ್ತಿತ್ತು.
ಹೀಗಾಗಿ ಕೆಲ ಪೋಷಕರು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ)ಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಂದ ಚಟುವಟಿಕೆ, ಕಾಲೇಜು ಅಭಿವೃದ್ಧಿ, ಸಾರಿಗೆ, ಗ್ರಂಥಾಲಯ ಮೊದಲಾದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಇದನ್ನು ಮೀರಿದಲ್ಲಿ ಅಂತಹ ಇಂಜಿನಿಯರಿಂಗ್ ಕಾಲೇಜುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.