ದೇಶವನ್ನು ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊರೊನಾ ಸೋಂಕು ಹೊಂದಿರುವ ಶಂಕಿತರ ಬಳಿ ಹೋಗಲೂ ಸಹ ಜನ ಭಯ ಬೀಳುತ್ತಿದ್ದಾರೆ. ಇಂತಹುದರ ಮಧ್ಯೆ ಸರ್ಕಾರಿ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಬಿಳಿ ಬಟ್ಟೆಯೊಂದರಲ್ಲಿ ಸುತ್ತಿ ಅಂಬುಲೆನ್ಸ್ ಮೂಲಕ ತರುವ ಸರ್ಕಾರಿ ಸಿಬ್ಬಂದಿ ಹೂಳಲು ತೆಗೆದ ಗುಂಡಿಗೆ ಶವವನ್ನು ದೂರದಿಂದಲೇ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಶವದ ಮೇಲೆ ಹೊದಿಸಿದ್ದ ಬಟ್ಟೆಯೂ ಕಳಚಿ ಬಿದ್ದಿದೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸರ್ಕಾರಿ ಸಿಬ್ಬಂದಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರದ ಕುರಿತಂತೆ ಮಾರ್ಗಸೂಚಿಗಳಿದ್ದು, ಆದರೆ ಈ ಸಿಬ್ಬಂದಿ ಅದ್ಯಾವುದನ್ನು ಪಾಲಿಸಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇದೀಗ ಸ್ಥಳೀಯ ಆಡಳಿತ ತನಿಖೆಗೆ ಮುಂದಾಗಿದೆ.