ವೃದ್ಧ ತಂದೆಯನ್ನು ಮನೆಯಿಂದ ಹೊರ ಹಾಕಿದ್ದ ಇಬ್ಬರು ಸಹೋದರರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ತಂದೆಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೆಂದು ಹೇಳಿದೆ. ಜೊತೆಗೆ ತಂದೆಗೆ ಪ್ರತಿ ತಿಂಗಳು ಹಣ ನೀಡುವಂತೆ ಆದೇಶ ನೀಡಿದೆ.
ದೆಹಲಿ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಇಬ್ಬರು ಗಂಡು ಮಕ್ಕಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದ್ರೆ ತಂದೆಯನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ತಂದೆ ಮನೆಯನ್ನು ಬಾಡಿಗೆಗೆ ನೀಡಿ ಅದ್ರ ಹಣವನ್ನು ಸಹೋದರರು ಹಂಚಿಕೊಳ್ತಿದ್ದಾರೆ. ಸ್ಥಳೀಯ ಕೋರ್ಟ್ ತಂದೆಗೆ ಪ್ರತಿ ತಿಂಗಳು 7 ಸಾವಿರ ರೂಪಾಯಿ ನೀಡುವಂತೆ ಕೇಳಿತ್ತು. ಅದನ್ನು ನೀಡ್ತಿಲ್ಲ. ಇದ್ರಿಂದ ವೃದ್ಧ ದುಡಿದು ಜೀವನ ನಡೆಸುವಂತಾಗಿತ್ತು.
ಸ್ಥಳೀಯ ಕೋರ್ಟ್ ಆದೇಶ ಪ್ರಶ್ನಿಸಿ ಸಹೋದರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಬಗ್ಗೆ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ವೃದ್ಧ ತಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸಹೋದರರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್, ತಂದೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡುವಂತೆ ಹೇಳಿದೆ. ನೀವು ಯಾರೇ ಆಗಿರಲಿ, ನೀವು ಈ ಸ್ಥಾನಕ್ಕೇರಲು ಕಾರಣವಾಗಿದ್ದು ನಿಮ್ಮ ತಂದೆ ಎಂಬುದನ್ನು ಮರೆಯಬೇಡಿ ಎಂದು ಕೋರ್ಟ್ ಹೇಳಿದೆ.