ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್ ಇಂದು ಹೈದರಾಬಾದ್‌ಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಿರಾಜ್ ಮನೆಗೆ ಹೋಗುವ ಬದಲು ನೇರವಾಗಿ ತಂದೆಯ ಸಮಾಧಿಗೆ ಹೋದ್ರು. ಸಿರಾಜ್ ತಂದೆ ಮೊಹಮ್ಮದ್ ಗೌಸ್ ನವೆಂಬರ್ 20 ರಂದು ನಿಧನರಾಗಿದ್ದಾರೆ. ಇದಕ್ಕೆ ಒಂದು ವಾರ ಮೊದಲು ಭಾರತ ತಂಡ ಆಸ್ಟ್ರೇಲಿಯಾವನ್ನು ತಲುಪಿತ್ತು. ಕೊರೊನಾ ಪ್ರೋಟೋಕಾಲ್ ಕಾರಣದಿಂದಾಗಿ ಸಿರಾಜ್, ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.
ದುಃಖದ ಮಧ್ಯೆಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿರಾಜ್ ಆಟ ಅತ್ಯುತ್ತಮವಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿರಾಜ್ ಭಾರತ ಪರ ಗರಿಷ್ಠ 13 ವಿಕೆಟ್ ಪಡೆದರು. ಬ್ರಿಸ್ಬೇನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿದ್ದರು.
ಮೊಹಮ್ಮದ್ ಸಿರಾಜ್ ತಮ್ಮ ತಂದೆಯ ಸಮಾಧಿ ಮುಂದೆ ಪ್ರಾರ್ಥನೆ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗ ಭಾರತೀಯ ತಂಡವನ್ನು ಪ್ರತಿನಿಧಿಸಬೇಕೆಂಬುದು ಸಿರಾಜ್ ತಂದೆಯ ಕನಸಾಗಿತ್ತು.