ಹೈದರಾಬಾದ್: ಹೈದರಾಬಾದ್ ನಲ್ಲಿ ಫಾರ್ಮಸಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೇ ನಡೆದಿಲ್ಲ ಇದೆಲ್ಲವೂ ಸುಳ್ಳು ಸಂಗತಿ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಎರಡು ದಿನಗಳ ಹಿಂದೆ ಹೈದರಾಬಾದ್ ನ ಘಟ್ಕೇಸರ ಠಾಣಾ ವ್ಯಾಪ್ತಿಯಲ್ಲಿ ಬಿ.ಫಾರ್ಮ್ ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಆಟೋದಲ್ಲಿ ಮನೆಗೆ ತೆರಳುತ್ತಿದ್ದಳು.
ಈ ವೇಳೆ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಓಮ್ನಿ ಕಾರಿಲ್ಲಿ ಕೂರಿಸಿಕೊಂಡು ತನ್ನ ಸ್ನೇಹಿತರೊಂದಿಗೆ ಯಾನಂಪೇಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ, ವಿವಸ್ತ್ರವಾಗಿಸಿ ಆಕೆಯನ್ನು ಬಿಟ್ಟು ಹೋಗಿದ್ದ. ವಿದ್ಯಾರ್ಥಿನಿ ಸ್ಥಳಿಯರ ಸಹಾಯ ಪಡೆದು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಳು ಎಂಬ ಸುದ್ದಿ ದೇಶಾದ್ಯಂತ ತಲ್ಲಣವನ್ನುಂಟುಮಾಡಿತ್ತು. ಆದರೆ ಈಗ ಆ ಸುದ್ದಿಯೇ ಸುಳ್ಳು. ಇದು ವಿದ್ಯಾರ್ಥಿನಿಯೇ ಹೆಣೆದ ಕಟ್ಟು ಕಥೆ ಎಂಬ ವಿಷಯ ಬಹಿರಂಗವಾಗಿದೆ.
ಮಹಿಳೆ ಕೈನಲ್ಲಿದ್ದ ಹಚ್ಚೆ ನೋಡಿ ಅತ್ಯಾಚಾರಿಗೆ ಜಾಮೀನು ನೀಡಿದ ಕೋರ್ಟ್
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಚಗೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್, ವಿದ್ಯಾರ್ಥಿನಿ ಮಹಿಳಾ ಡಿಸಿಪಿ ನಡೆಸಿದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ತನ್ನ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಚಿಲ್ಲರೆ ಹಣದ ವಿಚಾರವಾಗಿ ಹಿಂದೆ ನಡೆದಿದ್ದ ಜಗಳಕ್ಕೆ ಸೇಡು ತೀರಿಸಿಕೊಳ್ಳಲೆಂದು ಆಟೋ ಚಾಲಕನ ಮೇಲಿನ ಕೋಪಕ್ಕೆ ಇಂಥದ್ದೊಂದು ಕಥೆ ಸೃಷ್ಟಿಸಿದ್ದಾಗಿ ತಿಳಿಸಿದ್ದಾಳೆ ಎಂದಿದ್ದಾರೆ.
ಪೊಲೀಸ್ ಆಯುಕ್ತರು ಹೇಳುವ ಪ್ರಕಾರ ವಿದ್ಯಾರ್ಥಿನಿ ಪಕ್ಕಾ ಪ್ಲಾನ್ ಮಾಡಿ ಘಟನೆಯನ್ನು ಹೆಣೆದಿದ್ದು, ಗೂಗಲ್ ಮ್ಯಾಪ್ ನಲ್ಲಿ ಸಂತ್ರಸ್ತ ವಿದ್ಯಾರ್ಥಿಯ ಚಲನವಲನಗಳ ಬಗ್ಗೆ ದಾಖಲಾಗಿದೆ. ಸುಳ್ಳು ಕಥೆ ಹೆಣೆಯಲೆಂದೇ ಆಕೆ 4 ಕಿ.ಮೀ. ಕ್ರಮಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ಹಾಗೂ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಕ್ಕೆ ಅವರ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.