ರಾಮಾಯಣದ ಬಗ್ಗೆ ಓದಿದವರು ದಂಡಕಾರಣ್ಯದ ಬಗ್ಗೆ ತಿಳಿದೇ ಇರುತ್ತೀರಿ. ವನವಾಸದ ವೇಳೆ ಶ್ರೀರಾಮ ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಈ ದಂಡಕಾರಣ್ಯದಲ್ಲಿ ಸಾಕಷ್ಟು ಸಮಯದವರೆಗೆ ಕಾಲ ಕಳೆದಿದ್ದಾರೆ. ಭಯ ಹುಟ್ಟಿಸುವಷ್ಟು ದಟ್ಟವಾಗಿದ್ದ ಕಾಡನ್ನೇ ಮನೆಯಾಗಿಸಿಕೊಂಡು ಬದುಕಿದ್ದರು. ಇದು ಈಗ ಛತ್ತೀಸ್ಗಡ್ ರಾಜ್ಯದ ಬಸ್ತರ್ ಜಿಲ್ಲೆಯ ವ್ಯಾಪ್ತಿಯಲ್ಲಿದೆ.
ಇದರ ಅಸುಪಾಸಿನ ಅಬುಜ್ಮರ್ ಬೆಟ್ಟ ಪೂರ್ವ ಘಟ್ಟದಿಂದ ವಿಸ್ತಾರವಾಗಿ ಛತ್ತೀಸ್ಗಡ್, ಒರಿಸ್ಸಾ ಮತ್ತು ಆಂಧ್ರಪ್ರದೇಶದಾದ್ಯಂತ ವ್ಯಾಪಿಸಿದೆ. ಬಸ್ತಾರ್ ರಾಯ್ ಪುರದಿಂದ 264 ಕಿಮಿ ದೂರದಲ್ಲಿದ್ದು ಇಲ್ಲಿನ ವನ್ಯಜೀವಿಗಳು, ಜಲಪಾತಗಳು, ಪ್ರಾಚೀನ ದೇವಾಲಯಗಳು, ಅರಮನೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ದುರ್ಗಾದೇವಿಯ ದಂತೇಶ್ವರಿ ದೇವಾಲಯವೂ ಇಲ್ಲಿದ್ದು, ಇದು ಜಗದಾಲ್ ಪುರದಿಂದ 80 ಕಿ.ಮೀ. ದೂರದಲ್ಲಿರುವ ದಾಂತೇವಾಡ ಎಂಬ ಪಟ್ಟಣದಲ್ಲಿದೆ. ಚಿತ್ರಕೂಟ ಎಂಬ ಜಲಪಾತವೂ ಇಲ್ಲಿದ್ದು, ಇದು ಭಾರತದ ಅತಿ ವಿಶಾಲವಾದ ಜಲಪಾತಗಳಲ್ಲಿ ಒಂದಾಗಿದೆ. ತೀರತ್ ಘಡ್ ಜಲಪಾತವೂ ಆಕರ್ಷಕವಾಗಿದ್ದು ಇದರ ಸುತ್ತ ಶಿವ ಪಾರ್ವತಿ ದೇವಾಲಯವಿದೆ.