ರಷ್ಯಾ ತಯಾರಿಸಿರುವ ಸ್ಪುಟ್ನಿಕ್-5 ಕೋವಿಡ್-19 ಲಸಿಕೆಗಳನ್ನು ಭಾರತಾದ್ಯಂತ ಇರುವ ತನ್ನ ಆಸ್ಪತ್ರೆಗಳಲ್ಲಿ ಜೂನ್ ಎರಡನೇ ವಾರದಿಂದ ಹಾಕುವುದಾಗಿ ಅಪೋಲೋ ಸಮೂಹ ತಿಳಿಸಿದೆ.
ಈ ಲಸಿಕೆಯ ಒಂದು ಡೋಸ್‌ಗೆ 1,195 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಲಸಿಕೆಗೆ 995 ರೂಪಾಯಿ ಹಾಗೂ ಲಸಿಕೆ ಹಾಕುವ ಪ್ರಕ್ರಿಯೆಗೆ 200 ರೂ. ಖರ್ಚಾಗುತ್ತದೆ ಎಂದು ಅಪೋಲೋ ಸಮೂಹ ತಿಳಿಸಿದೆ.
ಇದುವರೆಗೂ ದೇಶದ 80 ವಿವಿಧ ಸ್ಥಳಗಳಲ್ಲಿ ಒಂದು ದಶಲಕ್ಷದಷ್ಟು ಕೋವಿಡ್ ಲಸಿಕೆಗಳನ್ನು ಅಪೋಲೋ ಆಸ್ಪತ್ರೆಗಳ ಸಮೂಹ ಹಾಕಿದ್ದು, ಸಾಂಕ್ರಮಿಕದ ವಿರುದ್ಧ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ, ಹೈ-ರಿಸ್ಕ್ ಇರುವ ಕಾರ್ಪೋರೇಟ್ ಉದ್ಯೋಗಿಗಳಿಗೆ ಮೊದಲ ಆದ್ಯತೆ ಕೊಡಲಾಗುತ್ತಿದೆ ಎಂದಿರುವ ಸಮೂಹದ ಕಾರ್ಯನಿರ್ವಾಹಕ ಉಪಮುಖ್ಯಸ್ಥೆ ಶೋಭನಾ ಕಮಿನೇನಿ, “ಜೂನ್ ತಿಂಗಳಲ್ಲಿ ನಾವು ಪ್ರತಿ ವಾರವೂ ಮಿಲಿಯನ್‌ನಷ್ಟು ಲಸಿಕೆ ಹಾಕಲಿದ್ದೇವೆ. ಜುಲೈನಲ್ಲಿ ಈ ಸಂಖ್ಯೆ ದುಪ್ಪಟ್ಟಾಗಲಿದೆ. ಸೆಪ್ಟೆಂಬರ್ ವೇಳೆಗೆ 20 ದಶಲಕ್ಷ ಲಸಿಕೆಗಳನ್ನು ಹಾಕಿ ಮುಗಿಸಬೇಕೆಂಬ ಗುರಿ ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ.
ರಷ್ಯನ್ ಲಸಿಕೆಗಳು ಮೇ ಆರಂಭದಲ್ಲಿ ಭಾರತಕ್ಕೆ ಆಗಮಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ಚುರುಕು ಸಿಕ್ಕಿದೆ.