
ಪ್ರಧಾನಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ವಿಷಯಗಳ ಕುರಿತು ಮಾತನಾಡಿದ್ರು.
ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜನರಿಂದ ಕೆಲ ಕಥೆಗಳನ್ನು ಕೇಳಿದರು. ಮಹಾತ್ಮ ಗಾಂಧಿ, ಭಗತ್ ಸಿಂಗ್ ಸೇರಿ ಕೃಷಿಯವರೆಗಿನ ಅನೇಕ ವಿಷ್ಯಗಳನ್ನು ಜನರ ಮುಂದಿಟ್ಟರು. ಕೃಷಿ ಮಸೂದೆಯ ಪ್ರಯೋಜನಗಳನ್ನು ವಿವರಿಸಿದರು.
ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿರಲು ಮೋದಿ ಜನತೆಗೆ ಮನವಿ ಮಾಡಿದ್ದಾರೆ. ಎಲ್ಲ ರೀತಿಯ ಸುರಕ್ಷಿತ ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ. ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡವೆಂದು ಮೋದಿ ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲೂ ಕೃಷಿ ಕ್ಷೇತ್ರವು ತನ್ನ ಶಕ್ತಿಯನ್ನು ತೋರಿಸಿದೆ. ದೇಶದ ರೈತರು ಎಷ್ಟು ಪ್ರಬಲರಾಗುತ್ತಾರೋ, ಹಳ್ಳಿ ಬಲಿಷ್ಠವಾಗುತ್ತದೆಯೋ ಅಷ್ಟು ದೇಶ ಸ್ವತಂತ್ರವಾಗುತ್ತದೆ. ರೈತರ ಬಲದಿಂದ ಮಾತ್ರ ಸ್ವಾವಲಂಬಿ ಭಾರತದ ಅಡಿಪಾಯ ರೂಪುಗೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರೈತ ಬಲಶಾಲಿಯಾಗಿದ್ದರೆ ಭಾರತ ಸ್ವಾವಲಂಬಿಯಾಗುತ್ತದೆ ಎಂದಿದ್ದಾರೆ. ರೈತರು ತಮ್ಮ ಸ್ವಂತ ಇಚ್ಛೆಯಂತೆ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ಅನೇಕ ನಿರ್ಬಂಧಗಳಿಂದ ಮುಕ್ತಗೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.