ನವದೆಹಲಿ: ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ ಆರೋಪಕ್ಕೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದ ಕಾಂಗ್ರೆಸ್ ಹಿರಿಯ ನಾಯಕರು ಇದೀಗ ಯು ಟರ್ನ್ ಹೊಡೆದಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಪತ್ರ ಬರೆದಿರುವ ಕಾಂಗ್ರೆಸ್ ನ ಕೆಲ ಹಿರಿಯ ನಾಯಕರು ಬಿಜೆಪಿ ಜತೆ ನಂಟು ಹೊಂದಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಕಿಡಿಕಾರಿದ್ದ ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್, ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿರುವುದು ಸಾಬೀತಾದರೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದರು.
ಅಲ್ಲದೇ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ, ನಾವು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಗಾಗಿ ದುಡಿದಿದ್ದೇವೆ. ಆದರೀಗ ಬಿಜೆಪಿ ಜತೆ ನಂಟು ಹೊಂದಿದ್ದೇವೆ ಎಂದು ಹೇಳಿಸಿಕೊಳ್ಳುತ್ತಿರುವುದು ಬೇಸರ ತಂದಿದೆ. ರಾಜಸ್ಥಾನ ಹೈಕೋರ್ಟ್ ನಲ್ಲಿ ಕಾಂಗ್ರೆಸ್ ಉಳಿಸುವಲ್ಲಿ ಯಶಸ್ವಿಯಾದೆ. ಮಣಿಪುರದಲ್ಲಿ ಕಾಂಗ್ರೆಸ್ ತರಲು ನೆರವಾದೆ ಆದಾಗ್ಯೂ ನಾವು ಬಿಜೆಪಿ ಜತೆ ಒಪ್ಪಂದದಲ್ಲಿದ್ದೇವೆ ಎನ್ನಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೆಲವೇ ಸಮಯದಲ್ಲಿ ತಮ್ಮ ಟ್ವೀಟ್ ಡಿಲಿಟ್ ಮಾಡಿದ್ದ ಕಪಿಲ್ ಸಿಬಲ್, ರಾಹುಲ್ ಗಾಂಧಿ ತಮ್ಮ ಜತೆ ಮಾತನಾಡಿದ್ದು, ಸಭೆಯಲ್ಲಿ ತಾವು ಆ ರೀತಿ ಹೇಳಿಲ್ಲ ಎಂದಿದ್ದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗುಲಾಮ್ ನಬಿ ಆಜಾದ್ ಕೂಡ ರಾಹುಲ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಅಂತಹ ಯಾವುದೇ ಚರ್ಚೆ ಸಭೆಯಲ್ಲಿ ನಡೆದಿಲ್ಲ ಎಂದು ತಿಳಿಸಿದ್ದು, ತಮ್ಮ ಹೇಳಿಕೆ ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡುವ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.