ಸಾಂಕ್ರಾಮಿಕ ರೋಗ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಆತ್ಮೀಯರ ಕೈಕುಲುಕಿ ಮಾತನಾಡಿಸಬೇಕೆಂದರೂ ಸಹ ಹಿಂದೆ ಮುಂದೆ ನೋಡುವಂತಾಗಿದೆ. ಇದು ಬಂಧು ಬಾಂಧವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಬೇಕಾದ ಮದುವೆ ಸಮಾರಂಭಗಳ ಮೇಲೂ ಪರಿಣಾಮ ಬೀರಿದೆ.
ಕೊರೊನಾ ವ್ಯಾಪಿಸದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ, ಮದುವೆ ಸಮಾರಂಭಗಳ ಕುರಿತು ಮಾರ್ಗಸೂಚಿ ರೂಪಿಸಿದ್ದು, ಕೇವಲ ಐವತ್ತು ಮಂದಿಯಷ್ಟೇ ಭಾಗವಹಿಸಬಹುದಾಗಿದೆ. ಇದರ ಮಧ್ಯೆ ಕೇರಳ – ತಮಿಳುನಾಡು ಗಡಿಯಲ್ಲಿ ವಿಶಿಷ್ಟ ರೀತಿಯಲ್ಲಿ ಮದುವೆಯೊಂದು ನಡೆದಿದೆ.
ಕೊರೊನಾ ವೈರಸ್ ನಿಂದ ತಮಿಳುನಾಡು ತತ್ತರಿಸುತ್ತಿದ್ದು ಸೋಂಕಿತರ ಪಟ್ಟಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಕೇರಳ – ತಮಿಳುನಾಡು ಗಡಿ ಸಂಚಾರಕ್ಕೆ ಮುಕ್ತವಾಗಿಲ್ಲ. ಆದರೆ ಇದು ಕೇರಳ ಮೂಲದ ವಧು ಹಾಗೂ ತಮಿಳುನಾಡು ಮೂಲದ ವರನ ಮದುವೆ ಸಮಾರಂಭಕ್ಕೆ ಅಡ್ಡಿಯಾಗಿಲ್ಲ.
ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿ ಪ್ರಿಯಾಂಕಾ ಅವರ ಮದುವೆ ತಮಿಳುನಾಡಿನ ರಾಬಿನ್ಸನ್ ಜೊತೆ ಇಡುಕ್ಕಿಯಲ್ಲಿ ಮಾರ್ಚ್ 22 ರಂದು ನಡೆಯಬೇಕಾಗಿತ್ತಾದರೂ ಲಾಕ್ಡೌನ್ ಕಾರಣಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ಈ ವಿವಾಹ ಜೂನ್ 7ರಂದು ಕೇರಳ – ತಮಿಳುನಾಡು ಗಡಿಭಾಗದಲ್ಲಿರುವ ಚಿನ್ನಾರ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲೇ ನಡೆದಿದೆ.
ವಧು – ವರ ಹಾಗೂ ಅವರ ಕುಟುಂಬಸ್ಥರು ತಮ್ಮ ತಮ್ಮ ಗಡಿಭಾಗದ ಬಳಿ ಬಂದಿದ್ದು, ವಧು – ವರ ಅಲ್ಲಿಯೇ ಮದುವೆಯಾಗಿದ್ದಾರೆ. ತಮ್ಮ ತಮ್ಮ ಗಡಿಯಲ್ಲಿ ನಿಂತುಕೊಂಡಿದ್ದ ಕುಟುಂಬಸ್ಥರು ಅಂತರ ಕಾಯ್ದುಕೊಂಡು ಆಶೀರ್ವದಿಸಿದ್ದಾರೆ.